ನ.27-30: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಷರೋತ್ಸವ ಮತ್ತು ಎಕ್ಸೆಲ್ ಪರ್ಬ-ನಟ ರಮೇಶ್ ಅರವಿಂದ್, ಯೋಗರಾಜ್ ಭಟ್ ಸೇರಿದಂತೆ ಸ್ವಾಮೀಜಿಯವರು, ವಿವಿಧ ಕ್ಷೇತ್ರದ ಗಣ್ಯರು ಭಾಗಿ: ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್ ಅವರಿಂದ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ವಿದ್ಯಾರ್ಥಿಗಳು ವಿದ್ಯಾಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವ ವಿದ್ಯಾದೇಗುಲ ಗುರುವಾಯನಕೆರೆಯ ಎಕ್ಸೆಲ್ ಕಾಲೇಜ್‌ ಸದಾ ಯಾವುದಾದರೊಂದು ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ಎಕ್ಸೆಲ್‌ ಪದವಿಪೂರ್ವ ಕಾಲೇಜು ವತಿಯಿಂದ ವಿದ್ಯಾಸಾಗರ ಮತ್ತು ಅರಮಲೆ ಬೆಟ್ಟ ಆವರಣದಲ್ಲಿ ನಾಲ್ಕು ದಿನಗಳ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಅಕ್ಷರೋತ್ಸವ ಹಾಗೂ ಎಕ್ಸೆಲ್ ಪರ್ಬ-2025 ಸಮಾರಂಭ ನೆರವೇರಲಿದೆ. ನ.27ರಿಂದ 30ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್‌ ಕುಮಾ‌ರ್ ಜೈನ್‌ ಬಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನ.27ರಂದು ಬೆಳಗ್ಗೆ 9ಕ್ಕೆ ಆಮಂತ್ರಣ ಪರಿವಾರದ ದಶಮಾನೋತ್ಸವ ಸಂಭ್ರಮದ ಸಹಯೋಗದಲ್ಲಿ ಯಕ್ಷಗಾನ ನಾಟ್ಯ ವೈಭವ ನಡೆಯಲಿದೆ. 10.30ಕ್ಕೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಿನಿ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಉದ್ಘಾಟಿಸಲಿದ್ದಾರೆ. ಪತ್ರಕರ್ತ ಸುರೇಂದ್ರ ಎಸ್.ವಾಗ್ಲೆ ನೂತನ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ | ಶ್ರೀನಾಥ್ ಎಂ.ಪಿ. ಯವರು ಎಕ್ಸೆಲ್ ಅಕ್ಷರ ಗೌರವ-2025 ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿ.ಕ.ಸಾ.ಪ ಅಧ್ಯಕ್ಷರಾದ ಯದುಪತಿ ಗೌಡ, ಗೌರವ ಉಪಸ್ಥಿತಿಯಲ್ಲಿ ಹಿರಿಯ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ, ಅಳದಂಗಡಿ ಆಮಂತ್ರಣ ಪಿವಾರದ ವಿಜಯ ಕುಮಾರ್‌ ಜೈನ್‌ ಇರಲಿದ್ದಾರೆ. ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಎಕ್ಸೆಲ್‌ ಅಕ್ಷರ ಗೌರವ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಮಧ್ಯಾಹ್ನ 2ಕ್ಕೆ ವಿದ್ಯಾಸಾಗರ ಆವರಣದ ಕುವೆಂಪು ಸಭಾಂಗಣದಲ್ಲಿ ಕನ್ನಡ ಕವಿಗೋಷ್ಠಿ ಹಾಗೂ ಅರಮಲೆ ಬೆಟ್ಟ ಆವರಣದಲ್ಲಿ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಸಂಜೆ 4.30ಯಿಂದ ಅರಮಲೆ ಬೆಟ್ಟ ಆವರಣದಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಪ್ರದೀಪ ನಾವೂರು, ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಮೋದ್‌ ಕುಮಾರ್‌, ಸುದ್ದಿ ಬಿಡುಗಡೆ ಪತ್ರಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ರಾಜಕೀಯ ವಿಶ್ಲೇಷಕರಾದ ರಾಘವ್‌ ಶರ್ಮಾ ಭಾಗವಹಿಸಲಿದ್ದಾರೆ.

ನ.28ರಂದು ಮಧ್ಯಾಹ್ನ 1.30ಕ್ಕೆ ಜರಗಲಿರುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಬೆಳಗಾವಿ ನಿಡುಸೋಸಿ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಎಕ್ಸೆಲ್ ಪರ್ಬ ಸಮಾರಂಭವನ್ನು ನಟ ರಮೇಶ್‌ ಅರವಿಂದ್ ಉದ್ಘಾಟಿಸಲಿದ್ದು, ಭಾರತ ಪರಿಕ್ರಮ ಯಾತ್ರಾ ಸಾಧಕ ಸೀತಾರಾಮ ಕೆದಿಲಾಯ, ಡಿಡಿಪಿಐ ಶಶಿಧರ್ ಜಿ.ಎಸ್, ಪತ್ರಕರ್ತ ಯೋಗೀಶ್ ಹೊಳ್ಳ ಎಂ. ಭಾಗವಹಿಸಲಿದ್ದಾರೆ.

ನ. 29ರಂದು ಮಧ್ಯಾಹ್ನ 1.30ಕ್ಕೆ ಶೈಕ್ಷಣಿಕ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಮುಖ್ಯಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್, ಅಡಿಷನಲ್ ಎಸ್‌ಪಿ ಅನಿಲ್‌ಕುಮಾ‌ರ್ ಭೂಮ ರೆಡ್ಡಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ವೆನ್ಲಾಕ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಸದಾನಂದ ಪೂಜಾರಿ, ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ| ವಿಶ್ವನಾಥ ಪಿ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಮೂಡುಬಿದಿರೆಯ ಲೆಕ್ಕ ಪರಿಶೋಧಕ ಆಕಾಶ್ ದೀಪ್ ಭಾಗವಹಿಸಲಿದ್ದಾರೆ.

ನ. 30ರಂದು ಸಂಜೆ 6.30ಕ್ಕೆ ಜರಗುವ ಕಾಲೇಜು ವಾರ್ಷಿಕೋತ್ಸವದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾಲ್ಕುದಿನವೂ ಬೆಳಗ್ಗೆ 9ರಿಂದ ರಾತ್ರಿ 10.30ರ ವರೆಗೆ ಸಭಾ ಕಾರ್ಯಕ್ರಮಗಳ ಜತೆಗೆ ಎಕ್ಸೆಲ್ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ನಡೆಯಲಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾ‌ರ್ ಮರಿಕೆ ಮಾತನಾಡಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಕೂಡ ಭಾಗವಹಿಸಬಹುದಾಗಿದೆ ಎಂದರು. ಅರಮಲೆ ಬೆಟ್ಟ ಕ್ಯಾಂಪಸ್‌ನ ಉಪಪ್ರಾಂಶುಪಾಲ ಲೋಹಿತ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here