




ಉಜಿರೆ: “ಪಡೆದ ಉಪಕಾರವನ್ನು ನೆನಪು ಮಾಡಿಕೊಂಡಾಗ ನಾವು ಕೃತಜ್ಞರಾಗುತ್ತೇವೆ ಹಾಗೂ ಪೂಜ್ಯರ ಮಾರ್ಗದರ್ಶನದೊಂದಿಗೆ ಎಸ್.ಡಿ.ಎಮ್ ಸಂಸ್ಥೆಯಲ್ಲಿ ವಿದ್ಯೆಯನ್ನು ಪಡೆಯುತ್ತಿರುವ ನೀವು ನಾವೆಲ್ಲರೂ ಧನ್ಯರು” ಎಂದು ಉಜಿರೆ ಎಸ್.ಡಿ.ಎಮ್ ಪದವಿ ಕಾಲೇಜಿನ ರಿಜಿಸ್ಟ್ರಾರ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ ಹೇಳಿದರು.
ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ(ಸಿ.ಬಿ.ಎಸ್.ಇ)ಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಸಂಭ್ರಮದ ಅಂಗವಾಗಿ ಆಯೋಜಿಸಿದ “ಸಂಸ್ಥಾಪಕರ ದಿನ (Founder’s day)” ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ಶಾಲಾ ವಿದ್ಯಾರ್ಥಿಗಳು ರಚಿಸಿದ ಸುವಿಚಾರ ಪುಸ್ತಕ ಹಾಗೂ ಸ್ಕ್ರಾಪ್ ಪುಸ್ತಕವನ್ನು ಬಿಡುಗಡೆಗೊಳಿಸಿ, ಹೆಗ್ಗಡೆಯವರು ನಡೆದು ಬಂದ ಹಾದಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ದಾನ ಪರಂಪರೆಯ ಕುರಿತು ಮೌಲ್ಯಾಧಾರಿತ ಮಾತುಗಳನ್ನಾಡಿದರು.


ಕಾರ್ಯಕ್ರಮದಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳಿಂದ ಪೂಜ್ಯರಿಗೆ ಶುಭಾಶಯ ಭಾಷಣ, 6ನೇ ಹಾಗೂ 8ನೇ ತರಗತಿಯ ವಿದ್ಯಾರ್ಥಿನಿಯರಿಂದ ಶಿಕ್ಷಕಿ ಸುಮಾ ಶ್ರೀನಾಥ್ ಅವರು ರಚಿಸಿರುವ ಪದ್ಯದ ಗುಂಪು ಗಾಯನ, ವಿದ್ಯಾರ್ಥಿಗಳಿಂದ ಪಂಚ ದಾನಗಳಾದ ವಿದ್ಯಾದಾನ, ಅನ್ನದಾನ, ವಸ್ತ್ರದಾನ, ಔಷಧದಾನ ಹಾಗೂ ವಸತಿ ದಾನಗಳ ಪ್ರಸ್ತುತಿ, 8ನೇ ತರಗತಿ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ ಆಯೋಜಿಸಲಾಗಿತ್ತು.
ಜನ್ಮದಿನದ ಅಂಗವಾಗಿ ಶಾಲೆಯಲ್ಲಿ ತರಗತಿವಾರು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಸ್ಕ್ರಾಪ್ ಪುಸ್ತಕ ತಯಾರಿ, ಭಿತ್ತಿ ಚಿತ್ರ ತಯಾರಿ, ಪೋಸ್ಟರ್ ತಯಾರಿ, ಶುಭಾಶಯ ಪತ್ರ ತಯಾರಿ ಮುಂತಾದ ಚಟುವಟಿಕೆಗಳು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿತ್ತು.
ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು. ಶಿಕ್ಷಕಿ ಶಾಂಟಿ ಜಾರ್ಜ್ ನಿರೂಪಿಸಿದರು.









