ನ.22: ಉಜಿರೆ- ಧರ್ಮಸ್ಥಳ-ಪೆರಿಯಶಾಂತಿ ಸ್ಪರ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

0

ಬೆಳ್ತಂಗಡಿ: ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಸ್ಪರ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ನ.22ರಂದು ಬೆಳಗ್ಗೆ 9:30ಕ್ಕೆ ಧರ್ಮಸ್ಥಳ ದ್ವಾರದ ಬಳಿ ಶಿಲಾನ್ಯಾಸ ನಡೆಯಲಿದೆ. 614 ಕೋಟಿ ರೂ. ವೆಚ್ಚದ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಹೆದ್ದಾರಿಗಳ ನಿರ್ವಹಣೆ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಹೊಂದಲಿದೆ. ಕಾಮಗಾರಿಯಲ್ಲಿ ರಸ್ತೆ ವಿಸ್ತರಣೆಗೊಳ್ಳಲಿದ್ದು, ಸುಸಜ್ಜಿತ ಚರಂಡಿಗಳು, ಅಗತ್ಯ ಸ್ಥಳಗಳಲ್ಲಿ ಕಿರು ಸೇತುವೆ, ಸೇತುವೆಗಳು, ಧರ್ಮಸ್ಥಳದ ಮುಖ್ಯದ್ವಾರದ ಬಳಿ ಬೆಂಗಳೂರು ಮೆಜೆಸ್ಟಿಕ್ ಮಾದರಿಯ ಅಂಡರ್ ಪಾಸ್, ರಾತ್ರಿಯ ಸಂಚಾರ ಸುರಕ್ಷತೆಗೆ ಪೇಟೆ ಪ್ರದೇಶಗಳಲ್ಲಿ ವಿಶೇಷ ವಿದ್ಯುತ್ ದೀಪಗಳ ಅಳವಡಿಕೆಯಾಗಲಿದೆ.

ಈ ರಸ್ತೆಯು 4 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರಗೊಂಡಿದೆ. ಬಳಿಕ ಸಾಕಷ್ಟು ಸಮೀಕ್ಷೆಗಳು ನಡೆದಿವೆ. ಉಜಿರೆ- ಪೆರಿಯಶಾಂತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಮರಗಳು ತೆರವುಗೊಳ್ಳಬೇಕಾಗಿದ್ದು ಅವುಗಳ ಲೆಕ್ಕಾಚಾರ ಪೂರ್ಣಗೊಂಡಿದೆ. ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಅಥವಾ ಒಂದು ರಾಷ್ಟ್ರೀಯ ಹೆದ್ದಾರಿಯಿಂದ ಇನ್ನೊಂದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಅಥವಾ ಒಂದು ಪ್ರಮುಖ ರಸ್ತೆಯನ್ನು ಸಂಪರ್ಕಿಸುವ ಒಳದಾರಿಗಳನ್ನು ಮೇಲ್ದರ್ಜೆಗೇರಿಸುವ ಸ್ಪರ್ ಯೋಜನೆಯಡಿ ನಡೆಯಲಿರುವ ಈ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸುವವರಿಗೆ ಅನುಕೂಲವಾಗಲಿದೆ.

ಉಜಿರೆ ಪೇಟೆಯಿಂದ ಸಿದ್ಧವನ ತನಕ ಈಗಾಗಲೇ ರಸ್ತೆ ಅಭಿವೃದ್ಧಿ ಹೊಂದಿದೆ. ಆದರೆ ಇಲ್ಲಿ ಮತ್ತೆ ಕಾಮಗಾರಿ ನಡೆಯಲಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. 2 ಕಿ.ಮೀ. ವ್ಯಾಪ್ತಿಯ ಈ ರಸ್ತೆ ಅಭಿವೃದ್ಧಿ ಹೊಂದಿದ್ದರೂ, ಇಲ್ಲಿ ಸರಿಯಾದ ಫುಟ್ಬಾತ್, ಪಾರ್ಕಿಂಗ್ ವ್ಯವಸ್ಥೆಗಳು ಇರುವುದಿಲ್ಲ ರಸ್ತೆ ಅಭಿವೃದ್ಧಿ ಹೊಂದಿರುವ ಜಾಗಗಳಲ್ಲಿ ವಾಹನಗಳ ಬೇಕಾಬಿಟ್ಟಿ ಪಾರ್ಕಿಂಗ್‌ನಿಂದ ಇತರ ವಾಹನ ಸವಾರರು ಹೈರಾಣರಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here