


ಉಜಿರೆ: “ಭಾರತ ವಿಶ್ವಗುರುವಾಗುವ ಹಾದಿಯಲ್ಲಿ ಕರ್ನಾಟಕದ ಮಕ್ಕಳಾದ ನಮ್ಮ ಕೊಡುಗೆ ನಿರಂತರವಾಗಿರಲಿ. ಈ ದಿನಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಎಂದೆಂದಿಗೂ ನಾವು ನೆನೆಯಲೇಬೇಕು”
ಎಂದು ಹಳೆಪೇಟೆ, ಉಜಿರೆ, ನಿಡ್ಲೆ ವಲಯ ಬೆಳ್ತಂಗಡಿಯ ಸಿ.ಆರ್.ಪಿ. ಪ್ರತಿಮಾ ಕೆ.ಎಂ. ಹೇಳಿದರು.


ಅವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ)ಯಲ್ಲಿ ಕನ್ನಡ ರಾಜ್ಯೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮ ಉದ್ಘಾಟಿಸಿ, ಮಾಸಿಕ ಕಾರ್ಯಚಟುವಟಿಕೆಗಳ ಅನಾವರಣಗೊಳಿಸಿ ವಿದ್ಯಾರ್ಥಿಗಳಿಗೆ ಕರ್ನಾಟಕದ ಇತಿಹಾಸ ಹಾಗೂ ಕನ್ನಡ ಭಾಷೆಯ ಹಿನ್ನೆಲೆಯ ಮಹತ್ವದ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಲಾ ವಿದ್ಯಾರ್ಥಿಗಳಿಂದ ಗುಂಪುಗಾಯನ ಹಾಡಲಾಯಿತು. ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮನ್ಮೋಹನ್ ನಾಯಕ್ ಕೆ.ಜಿ. ಸ್ವಾಗತಿಸಿ, ವಿದ್ಯಾರ್ಥಿನಿ ಅನರ್ಘ್ಯ ನಿರೂಪಿಸಿದರು. ಧೃತಿ ವಂದಿಸಿದರು.









