


ಬೆಳ್ತಂಗಡಿ: ನ. 1ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಯಾ ವಿಶೇಷ ಶಾಲೆಯಲ್ಲಿ 70ನೇ ವರ್ಷದ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಫಾ. ವಿನೋದ್ ಮಸ್ಕರೇನಸ್ ರವರು ಸರ್ವರಿಗೂ ರಾಜ್ಯೋತ್ಸವದ ಶುಭಾಶಯವನ್ನು ಕೋರುತ್ತಾ, ನಮ್ಮ ಕರ್ನಾಟಕ ರಾಜ್ಯದ ಏಳಿಗೆಗಾಗಿ ಸಾಮಾಜಿಕವಾಗಿ, ಸಾಹಿತ್ಯ, ಕಲೆ, ವಿಜ್ಞಾನ, ರಾಜಕೀಯ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಹುತಾತ್ಮರು ಹಾಗೂ ಸೇವೆ ಸಲ್ಲಿಸುತ್ತಿರುವ ಎಲ್ಲಾ ಗಣ್ಯರನ್ನು ಸ್ಮರಿಸಿದರು. ಅವರೆಲ್ಲರ ನಿರಂತರ ಪರಿಶ್ರಮದಿಂದಾಗಿ ಇಂದು ಕರ್ನಾಟಕವು ಇಡೀ ದೇಶದಲ್ಲೇ ಮೊದಲ ಸ್ಥಾನಮಾನವನ್ನು ಪಡೆದ ಕೆಲವೊಂದು ರಾಜ್ಯಗಳಲ್ಲಿ ಒಂದಾಗಿದೆ. ಇಂತಹ ಪುಣ್ಯ ಭೂಮಿಯಲ್ಲಿ ಜನ್ಮತಾಳಿದ ನಾವೆಲ್ಲರೂ ಜಾತಿ, ಮತ, ಧರ್ಮ, ಸಾಮಾಜಿಕ ಸ್ಥಾನ ಮಾನ, ಬಡವ ಬಲ್ಲಿದ ಎನ್ನದೇ ಪರಸ್ಪರ ಅನ್ಯೋನ್ಯವಾಗಿ ಬೆರೆತು ನಮ್ಮ ನಾಡನ್ನು ಇನ್ನಷ್ಟು ಅಭಿವೃಧ್ಧಿಯ ಪಥದತ್ತ ಸಾಗಿಸುವ ಮಹತ್ತರ ಜವಾಬ್ದಾರಿ ನಮಗಿದೆ ಎಂದರು.


ಶಾಲೆಯ ವಿಶೇಷ ಶಿಕ್ಷಕಿ ಚಿರಂಜೀವಿ ಅವರು ಕರ್ನಾಟಕ ರಾಜ್ಯದ ಸವಿಶೇಷತೆಯನ್ನು ಮಕ್ಕಳಿಗೆ ತಿಳಿಸಿದರು. ದಯಾ ವಿಶೇಷ ಶಾಲೆಯ ಶಿಕ್ಷಕರು ನಾಡಗೀತೆಯನ್ನು ಹಾಡಿ, ಶಾಲಾ ಮಕ್ಕಳು ರಾಜ್ಯ ಪ್ರೇಮವನ್ನು ಪ್ರತಿಬಿಂಬಿಸುವ ವಿವಿಧ ನೃತ್ಯ, ಹಾಡು, ಮತ್ತು ಭಾಷಣಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆಯ ಆಪ್ತಸಮಾಲೋಚಕರಾದ ಮಿಸ್. ಮೆರಿನ್, ಶಾಲಾ ಮಕ್ಕಳ ಪೋಷಕ ಪ್ರತಿನಿಧಿಯಾಗಿ ಗೀತಾ, ಮಕ್ಕಳ ಪ್ರತಿನಿಧಿಯಾಗಿ ವಿಶ್ವಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂಭ್ರಮಾಚರಣೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಸಿ.ಕೆ.ಎಸ್.ಕೆ ಯ ಸಿಬ್ಬಂದಿ ವರ್ಗದವರು, ೧೦೫ ವಿಶೇಷ ಚೇತನ ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕಿ ಜೋನ್ಸಿಲ್ಲಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸ್ವಾಗತಿಸಿ, ವಿಶೇಷ ಶಿಕ್ಷಕಿ ಮಿಸ್. ಧನ್ಯಾ ಕೆ.ವಿ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಸ್ಪೀಚ್ ಥೆರಪಿಸ್ಟ್ ರಕ್ಷಾ ಅರುಣ್ ಪೂಜಾರಿ ಅವರು ವಂದಿಸಿದರು.









