ಉಜಿರೆಯಲ್ಲಿ ವಿಕಲಚೇತನರ ಗ್ರಾಮ‌ ಸಭೆ-ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಕಲಚೇತನರ ಬಗ್ಗೆ ಪಂಚಾಯತ್ ವಿಶೇಷ ಜವಾಬ್ದಾರಿಯುತ ಕಾಳಜಿ ವಹಿಸುತ್ತಿದೆ: ಉಷಾಕಿರಣ ಕಾರಂತ

0

ಉಜಿರೆ: ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 128 ಮಂದಿ ಗುರುತಿನ ಚೀಟಿ ಪಡೆದ ವಿಶೇಷಚೇತರಿದ್ದು, ಅವರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಪುನರ್ವಸತಿ ಕಾರ್ಯಕರ್ತ ವಿಪುಲ್ ಅವರ ಮೂಲಕ ಪೂರಕ ಕೆಲಸ ಮಾಡಲಾಗುತ್ತಿದೆ. ಅವರೆಲ್ಲರ ಬಗ್ಗೆ ವಿಶೇಷ ಕಾಳಜಿಯನ್ನು ಗ್ರಾಮ ಪಂಚಾಯತ್ ಹೊಂದಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಉಷಾಕಿರಣ ಕಾರಂತ ಹೇಳಿದರು. ವಿಶ್ವ ವಿಶೇಷಚೇತನರ ದಿನಾಚರಣೆಯ ಅಂಗವಾಗಿ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅ.30ರಂದು ನಡೆದ ವಿಶೇಷಚೇತನರ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ‌ ಅವರು ಮಾತನಾಡಿದರು.

ಪಿಡಿಒ‌ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ, ನಮ್ಮ ಪಂಚಾಯತ್ ನಿಂದ ವಿಶೇಷಚೇತನರ ಮೀಸಲು ಅನುದಾನವನ್ನು ಅವರಿಗಾಗಿಯೇ ವಿನಿಯೋಗಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹಳೆಪೇಟೆಯಲ್ಲಿರುವ ವಿಶೇಷಚೇತನರ ಶಾಲೆಗೆ ಶಿಕ್ಷಕರನ್ನು ನೇಮಿಸಿ ವೇತನ ಪಾವತಿಸಲಾಗುತ್ತಿದೆ. ನಮ್ಮದಲ್ಲದೆ ಇತರೆಡೆಯಿಂದ ಅರ್ಜಿ ಬಂದರೂ ನಾವು ಸಹಕಾರ ನೀಡಲಿದ್ದೇವೆ ಎಂದರು.

ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ, ಅವರು ವಿಕಲಚೇತನರಿಗೆ ಸರಕಾರದಿಂದ ಇರುವ ಸೌಲಭ್ಯಗಳ ಸಮಗ್ರ ಮಾಹಿತಿ ನೀಡಿದರು. ಮತ್ತು ಸಾರ್ವಜನಿಕರ ಸಂದೇಹಗಳಿಗೆ ಸಮರ್ಪಕವಾಗಿ ಉತ್ತರಿಸಿದರು. ಹಾಗೆಯೇ ಸಮನ್ವಯ ಶಿಕ್ಷಣ‌ ಸಂಪನ್ಮೂಲ ವ್ಯಕ್ತಿ ಸೀತಾ ಆರ್. ಸೇಠ್ ಇಲಾಖಾ ಮಾಹಿತಿ ನೀಡಿದರು. ಸಹಯೋಗ ನೀಡಿದ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘ ಬೆಳ್ತಂಗಡಿ ಅಧ್ಯಕ್ಷ ಎ.ಯು ಯೋಹಾನ್ ಅವರು ಸಹಕಾರ ಸಂಘದ ಪ್ರಮುಖ ಮಾಹಿತಿಯನ್ನು ವಿವರಿಸಿದರು ಮತ್ತು ಶುಭ ಕೋರಿದರು. ಸಲಹಾ ಸಮಿತಿ ಸದಸ್ಯ ಅಶ್ರಫ್ ಆಲಿ ಕುಂಞಿ ಮುಂಡಾಜೆ ಅವರು ಬ್ಯಾಂಕ್ ಸದಸ್ಯತ್ವ, ವಿಶೇಷಚೇತನರಿಗಾಗಿಯೇ ರಾಜ್ಯಮಟ್ಟದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನಲ್ಲಿ ಈಗ ಇರುವ ವ್ಯವಹಾರ ವಿವರ, ಸಾಲಸೌಲಭ್ಯಗಳ ಮಾಹಿತಿ‌ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಸದಸ್ಯರಾದ ಸಂಧ್ಯಾ, ಮಂಜುಳಾ ಉಮೇಶ್, ಲಲಿತಾ ಬಿ., ಸಚಿನ್, ಶರೀಫ್ ಮತ್ತು ಲಲಿತಾ, ಸಾನಿಧ್ಯ ವಿಶೇಷ ಶಾಲಾ ಮೇಲ್ವಿಚಾರಕಿ ಮಲ್ಲಿಕಾ ರಮೇಶ್, ವಿಕಲಚೇತನರ ಬ್ಯಾಂಕ್ ಪರವಾಗಿ ಸಹನ್ ಕುಮಾರ್, ಭವ್ಯಾ,‌ ಸಿ.ಕೆ. ಚಂದ್ರಕಲಾ, ಸುರೇಶ್ ಮಾಸ್ಟರ್ ಲಾಯಿಲ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗಳಾದ ಎಂ.ಜೆ ಜೋಸೆಫ್, ರಾಧಿಕ, ಸುಲೋಚನ, ಈರಣ್ಣ ಉಪಸ್ಥಿತರಿದ್ದರು.

ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನೀತಾ ಅವರ ಮೂಲಕ ಎಲ್ಲಾ ವಿಕಲಚೇತರ ಆರೋಗ್ಯ ತಪಾಸಣೆ ನಡೆಸಲಾಯಿತು. ಪಂಚಾಯತ್ ವ್ಯಾಪ್ತಿಯ ಎಲ್ಲಾ ವಿಕಲಚೇತನರಿಗೆ ಕಿಟ್ ವಿತರಣೆ, ಒರ್ವ ಫಲಾನುಭವಿಗೆ ವೈದ್ಯಕೀಯ ನೆರವು, ಒಬ್ಬರಿಗೆ ಗಾಲಿ ಕುರ್ಚಿ ಹಾಗೂ ರಾಜಕೇಸರಿ ಸೇವಾ ಟ್ರಸ್ಟ್‌ ಮೂಲಕ ಓರ್ವ ಫಲಾನುಭವಿಗೆ ಮೊಬೈಲ್ ಫೋನ್ ಹಸ್ತಾಂತರಿಸಲಾಯಿತು. ಬೆಳ್ತಂಗಡಿ ನಗರ ಪುನರ್ವಸಿ ಕಾರ್ಯಕರ್ತೆ ಫೌಝಿಯಾ ಆತ್ಮಸ್ಥೈರ್ಯ ತುಂಬುವ ಮಾತನ್ನಾಡಿದರು.

ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದ್ದು ವರದಿ ಮಂಡಿಸಿದರು. ಗ್ರಾ.ಪಂ. ಕಾರ್ಯದರ್ಶಿ ಶ್ರವಣ್ ಕುಮಾರ್ ಸ್ವಾಗತಿಸಿದರು. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಚರಿಷ್ಮಾ ಮತ್ತು ದಕ್ಷಯ್ ನಿರೂಪಿಸಿದರು. ಇತರ ವಿದ್ಯಾರ್ಥಿಗಳು ಸಹಕರಿಸಿದರು. ಸಾನಿಧ್ಯ ಕೌಶಲ ತರಬೇತಿ ಕೇಂದ್ರದ ಮಕ್ಕಳು ಪ್ರಾರ್ಥನೆ ಹಾಡಿದರು.
ಗ್ರಾ.ಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಮಮತಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here