ಶ್ರೀ ಕ್ಷೇತ್ರ ಸೌತಡ್ಕ ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ

0

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ಕಾಮಧೇನು ಗೋಶಾಲೆಯಲ್ಲಿ ಬುಧವಾರದಂದು ಧಾರ್ಮಿಕ ಭಕ್ತಿ ಮತ್ತು ಸಂಸ್ಕೃತಿಯ ಮಹೋತ್ಸವದ ವಾತಾವರಣದಲ್ಲಿ ಗೋಪೂಜೆ ಅದ್ದೂರಿಯಾಗಿ ನೆರವೇರಿತು.

ದೇವಸ್ಥಾನದ ಅರ್ಚಕ ಗುರುರಾಜ ಉಪ್ಪಾರ್ಣ ಅವರ ಪೌರೋಹಿತ್ಯದಲ್ಲಿ ಅರ್ಚಕ ವೃಂದದ ಸಹಕಾರದಿಂದ ಗೋಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು. ಪುರಾತನ ಸಂಸ್ಕೃತಿಯ ಅಮೂಲ್ಯ ಅಂಶವಾದ ಗೋಪೂಜೆಯ ಮೂಲಕ ಭಕ್ತರು “ಗೋಮಾತೆ ಸೇವೆಯೇ ದೇವಸೇವೆ” ಎಂಬ ಸಂದೇಶವನ್ನು ಮತ್ತೊಮ್ಮೆ ಜೀವನದ ಭಾಗವನ್ನಾಗಿ ಮಾಡಿಕೊಂಡರು.

ಕಾಮಧೇನು ಗೋಶಾಲೆಯಲ್ಲಿ ಪ್ರಸ್ತುತ ಸುಮಾರು 250ಕ್ಕೂ ಹೆಚ್ಚು ಗೋವುಗಳು ಪೋಷಿಸಲ್ಪಡುತ್ತಿದ್ದು, ಅವುಗಳೆಲ್ಲವನ್ನು ಈ ದಿನ ವಿಶೇಷವಾಗಿ ಶುಚಿಗೊಳಿಸಿ, ಹೂಮಾಲೆಗಳ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಮಹಿಳಾ ಭಕ್ತರು ಹಾಗೂ ಸೇವಾದಾರರು ಗೋವುಗಳ ಶೃಂಗಾರ ಕಾರ್ಯದಲ್ಲಿ ಭಾಗವಹಿಸಿದ್ದರು. ನಂತರ ಗೋವುಗಳಿಗೆ ದೋಸೆ, ಅವಲಕ್ಕಿ, ಪಂಚಕಜ್ಜಾಯ, ಬೆಲ್ಲ ಹಾಗೂ ವಿವಿಧ ಸವಿಯ ಖಾದ್ಯಗಳು ಸಮರ್ಪಿಸಲ್ಪಟ್ಟವು.

ಪೂಜೆಯ ಬಳಿಕ ಗೋಶಾಲೆಯಲ್ಲಿ ದಿನನಿತ್ಯ ಶ್ರಮಿಸುತ್ತಿರುವ ನೌಕರರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಮತ್ತು ಉಷಾ ದಂಪತಿಗಳು ಗೋವಿನ ಪಾದ ತೊಳೆದು, ಹಣೆಗೆ ಅರಸಿನ ಕುಂಕುಮ ಹಚ್ಚಿ, ಹೂಮಾಲೆ ತೊಡಿಸಿ ಗೋವುಗಳಿಗೆ ಆರತಿ ಬೆಳಗುವ ಮೂಲಕ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್ ಗೌಡ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಪ್ರಶಾಂತ್ ಮಚ್ಚಿನ, ಲೋಕೇಶ್ವರಿ ವಿನಯಚಂದ್ರ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ್ ರೈ ಆರಂತಬೈಲು, ಕಾರ್ಯದರ್ಶಿ ಶ್ಯಾಮರಾಜ್, ಉದ್ಯಮಿ ಗಣೇಶ್ ಕಲಾಯಿ, ದಯಾನೀಶ್ ಕೊಕ್ಕಡ ಹಾಗೂ ಸ್ಥಳೀಯರು, ಭಕ್ತರು, ಸಾಮಾಜಿಕ ಹಿತೈಷಿಗಳು ಮತ್ತು ದೇವಸ್ಥಾನದ ನೌಕರರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here