ಶಿರ್ಲಾಲು: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಗುರುಜಯಂತಿ

0

ಶಿರ್ಲಾಲು: ‘ನಾರಾಯಣ ಗುರುಗಳು ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ಸಂತರು. ಅವರು ಬದುಕಿನುದ್ದಕ್ಕೂ ನಾವು ಬೆಳೆಸಿಕೊಳ್ಳಬೇಕಾದ ಅದ್ಭುತ ವಿಚಾರಧಾರೆಯನ್ನು ನೀಡಿದ್ದಾರೆ. ನಾವು ಅದನ್ನು ಪಾಲಿಸುವುದೇ ಅವರಿಗೆ ಮಾಡುವ ಪೂಜೆ – ಪ್ರಸಾದವಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ಹೇಳಿದರು.

ಅವರು ಅ. 13ರಂದು ಶಿರ್ಲಾಲು ಬ್ರಹ್ಮ ಬೈದೆರ್ಕಳ ಗರಡಿ ವಠಾರದಲ್ಲಿ ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು – ಕರಂಬಾರು ಇದರ ನೇತೃತ್ವದಲ್ಲಿ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲು ಕರಂಬಾರು ಇದರ ಸಹಕಾರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಗುರು ಜಯಂತಿ ಪ್ರಯುಕ್ತ ಗ್ರಾಮ ಸಮಿತಿಯಿಂದ ನಡೆದ 27 ನೇ ವರ್ಷದ ಗುರುಪೂಜೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಗುರು ಸಂದೇಶ ನೀಡಿದರು.

‘ಸಮಾಜದ ವಿರೋಧವನ್ನು ಎದುರು ಹಾಕಿಕೊಂಡು ಪರಿವರ್ತನೆ ಮಾಡುವುದು ಸುಲಭದ ವಿಚಾರವಲ್ಲ. ಆದರೆ ನಾರಾಯಣ ಗುರುಗಳು ನಿಕೃಷ್ಟವಾಗಿದ್ದ ಸಮಾಜವನ್ನು ಭವಿಷ್ಯದ ಬದುಕಿನ ಉತ್ತಮ ಸ್ಥಿತಿಗಾಗಿ ಶಾಂತಿಯುತವಾಗಿ ಪರಿವರ್ತನೆಗೊಳಿಸಿದರು. ಧಾರ್ಮಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಮಾಡಿ ಸಾಮಾಜಿಕ ಕ್ರಾಂತಿಯನ್ನು ರೂಪಿಸಿದರು. ಇಂದು ಕೆಳ ವರ್ಗದವರೂ ನೆಮ್ಮದಿಯ ಬದುಕು, ಸ್ವಾಭಿಮಾನದ ಬದುಕು ಕೊಟ್ಟ ನಾರಾಯಣ ಗುರುಗಳ ವಿಚಾರ ಪಾಲಿಸುವುದೇ ನಮ್ಮ ಜೀವನದ ಧರ್ಮವಾಗಿರಬೇಕು. ಶೋಷಿತ ವರ್ಗಕ್ಕೆ ಸ್ಪಂದಿಸುವ ಸೇವಾ ಕಾರ್ಯ ಸಂಘಟನೆಯ ಮೂಲಕ ನಿತ್ಯ ನಿರಂತರವಾಗಿ ನಡೆಯಲಿ’ ಎಂದು ಅವರು ತಿಳಿಸಿದರು.

ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್ ಕುಕ್ಕೇಡಿ ಮಾತನಾಡಿ, ‘ ಅನೇಕ ಸಾಮಾಜಿಕ ಚಟುವಟಿಕೆಯ ಮೂಲಕ ತಾಲ್ಲೂಕಿಗೆ ಹೆಸರು ತರುವ ಕೆಲಸವನ್ನು ಶಿರ್ಲಾಲಿನ ಬಿಲ್ಲವ ಸಂಘಟನೆಗಳು ಮಾಡುತ್ತಾ ಬಂದಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸ್ವಾಭಿಮಾನದ ಬದುಕು ಕೊಡುವ ಕೆಲಸ ಸಂಘಟನೆಯ ಮೂಲಕ ನಿತ್ಯ ನಿರಂತರವಾಗಿ ನಡೆಯಲಿ’ ಎಂದು ಶುಭ ಹಾರೈಸಿದರು.

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಲ್ಲ ಮಾತನಾಡಿ, ‘ ಪ್ರತಿಯೊಬ್ಬರೂ ಸಂಘಟನೆ ಜತೆ ನಿರಂತರ ಸಂಪರ್ಕದಲ್ಲಿರಬೇಕು. ವ್ಯಕ್ತಿಯೊಬ್ಬನಿಂದ ಸಾಧ್ಯವಾಗದ್ದು ಸಂಘಟನೆ ಮೂಲಕ ಸಾಧ್ಯವಾಗುತ್ತದೆ. ಕಷ್ಟಕ್ಕೆ ಒಳಗಾದವರಿಗೆ ನ್ಯಾಯ ನೀಡುವ ಕಡೆಗೆ ನಾವು ಚಿಂತನೆ ಮಾಡಬೇಕು. ಸಾಧನೆ ಮಾಡಿದವರಿಗೆ ಸಹಕಾರ ಮಾಡುವ ಮನೋಭಾವ ನಮ್ಮಲ್ಲಿರಬೇಕು’ ಎಂದರು.

ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು – ಕರಂಬಾರು ಇದರ ಅಧ್ಯಕ್ಷ ಸದಾಶಿವ ಪೂಜಾರಿ ಊರ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮ ಬೈದೆರ್ಕಳ ಗರಡಿ ಆಡಳಿತ ಸಮಿತಿ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ತಾಲ್ಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಜ್ಞಾನೇಶ್ ಕುಮಾರ್ ಕಟ್ಟ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶೋಭಾ ಶುಭಕರ ಹೇಡ್ಯದಡ್ಡ, ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಯತೀಶ್ ಪೂಜಾರಿ ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ ಸಾಧಕಿ ವಿಪೇಕ್ಷಿತ ಹಾಗೂ ದ್ವಿತೀಯ ಪಿಯುಸಿ ಸಾಧಕಿ ಅಕ್ಷರ ಇವರನ್ನು ಸನ್ಮಾನಿಸಲಾಯಿತು. ಶಿರ್ಲಾಲು ಸಿ.ಎ. ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸಮಾಜ ಬಾಂಧವರನ್ನು, ಸ್ಯಾಕ್ಷಫೋನ್ ವಾದನ ನಡೆಸಿಕೊಟ್ಟ ಪ್ರತೀಕ್ಷಾ ಮತ್ತು ಪ್ರಣೀತ ಇವರನ್ನು ಗೌರವಿಸಲಾಯಿತು. ನಿರಂಜನ ಶಾಂತಿ ಮತ್ತು ತಂಡದವರ ಪೌರೋಹಿತ್ಯದಲ್ಲಿ ಗುರುಪೂಜೆ ನಡೆಯಿತು.

ಯುವ ಬಿಲ್ಲವ ವೇದಿಕೆ ಕೋಶಾಧಿಕಾರಿ ರಂಜಿತ್ ಅಜಿರೋಲಿ ಸ್ವಾಗತಿಸಿದರು. ಸಂಘದ ದಿನೇಶ್ ಕರ್ದೊಟ್ಟು ಸಂಘದ ವಾರ್ಷಿಕ ವರದಿಯನ್ನು, ನಿಕಟ ಪೂರ್ವಾಧ್ಯಕ್ಷ ಪ್ರವೀಣ್ ಪಾಲನೆ ಸನ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಹರೀಶ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿ, ಯುವ ವಾಹಿನಿ ಸಂಚಲನ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ್ ಕಟ್ರಬೈಲು ವಂದಿಸಿದರು.

LEAVE A REPLY

Please enter your comment!
Please enter your name here