ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ಅವಮಾನ, ಸಂವಿಧಾನದ ಮೇಲಿನ ದಾಳಿ: ಸಂತೋಷ್ ಕುಮಾರ್ ಲಾಯಿಲ

0

ಬೆಳ್ತಂಗಡಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿರುವ ಬಿ.ಆರ್.ಗವಾಯಿ ಅವರಿಗೆ ನ್ಯಾಯವಾದಿ ಓರ್ವರು ಪಾದರಕ್ಷೆ ಎಸೆಯಲು ಯತ್ನಿಸಿ ಅವಮಾನ ಮಾಡಿರುವ ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೆ.ಡಿ.ಪಿ ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೆಡಿಪಿ ಸದಸ್ಯರು, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಲಕ್ಷಗಟ್ಟಲೆ ಪುಸ್ತಕಗಳನ್ನು ಓದಿ, ನೂರಕ್ಕೂ ಅಧಿಕ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಎರಡು ಸಾವಿರಕ್ಕೂ ಅಧಿಕವಾದ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ ಜಗತ್ತಿನ ಅತೀ ಶ್ರೇಷ್ಠ ಲಿಖಿತ ಸಂವಿಧಾನವನ್ನು ಈ ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಇಂತ ಭವ್ಯವಾದ ಸಂವಿಧಾನದಿಂದ ಆಯ್ಕೆಯಾದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳನ್ನು ಅವಮಾನ ಮಾಡುವುದೆಂದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅವಮಾನ ಮಾಡಿದಂತೆ. ಈ ರೀತಿಯ ಮನೋಭಾವ ಹೊಂದಿರುವ ವ್ಯಕ್ತಿಯನ್ನು ಬಂಧಿಸುವುದು ಮಾತ್ರ ಅಲ್ಲ, ಅವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕೆಂದು ಆಗ್ರಹಪಡಿಸುತ್ತೇನೆ ಎಂದರು.

ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯಾತೀತ ಮನಸ್ಸುಗಳು ಅವರ ಬೆಂಬಲಕ್ಕೆ ಇವೆ ಎನ್ನುವುದನ್ನು ಅವರ ಗಮನಕ್ಕೆ ತರಬಯಸುತ್ತೇನೆ. ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಮುಖ್ಯನ್ಯಾಯಮೂರ್ತಿಗಳು ಯಾವುದೇ ಪಕ್ಷ ಇಲ್ಲವೇ ಧರ್ಮಕ್ಕೆ ಸೇರಿದವರಲ್ಲ. ಈ ದೃಷ್ಟಿಯಿಂದ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಸುಪ್ರೀಂ ಕೋರ್ಟ್ ನಲ್ಲಿ ನಡೆದಿರುವ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದು ತಿಳಿಸಿದರು.

ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕುವ ಉದ್ದೇಶಕ್ಕಾಗಿಯೇ ವಕೀಲರಾದ ರಾಕೇಶ್ ಕಿಶೋರ್ ರಂತಹ ಕೊಳಕು ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎನ್ನುವುದನ್ನು ನಾವು ಮರೆಯಬಾರದು. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಮತ್ತು ಇಂಥ ನಿಕೃಷ್ಟ ಮನೋಭಾವನೆಯನ್ನು ಹೊಂದಿರುವ ಇವರನ್ನು ಭಾರತೀಯ ಬಾರ್ ಕೌನ್ಸಿಲ್ ನಿಂದ ವಕೀಲ ವೃತ್ತಿಯನ್ನು ರದ್ದುಪಡಿಸುವುದು ಮಾತ್ರ ಅಲ್ಲ, ಭಯೋತ್ಪಾದನೆ ಹಾಗೂ ದೇಶ ದ್ರೋಹದ ಕೇಸು ದಾಖಲಿಸುವ ಮೂಲಕ ಬುದ್ದಿ ಕಳಿಸಬೇಕಾಗಿದೆ ಮತ್ತು ಭಾರತೀಯ ಸಂವಿಧಾನದ ಆಶಯದಂತೆ ಬದುಕುತಿರುವ ಭಾರತೀಯರಾದ ನಾವೆಲ್ಲರೂ ಭಾರತದ ಸರ್ವೋಚ್ಚ ನ್ಯಾಯಾಲದ ಮುಖ್ಯ ನ್ಯಾಯಮೂರ್ತಿಯಾದ ಬಿ. ಆರ್. ಗವಾಯಿ ಇವರೊಂದಿಗೆ ಇದ್ದೇವೆ ಎoಬುವುದನ್ನು ನಾವೆಲ್ಲರೂ ಸಾರಬೇಕು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here