ಮುಂಡಾಜೆ: “ವಿದ್ಯಾರ್ಥಿಗಳು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪರೋಪಕಾರ ಮನೋಭಾವವನ್ನು ಬೆಳೆಸಿಕೊಂಡು ಸತ್ಕಾರ್ಯವನ್ನು ಮಾಡಿದಾಗ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ತಿಳಿಸಿ ಕೊಡುತ್ತದೆ” ಎಂದು ಬಳ್ಳಾರಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೋಸ್ ಇ.ಎಂ. ಕಿಲ್ಲೂರು ಅವರು ಅಭಿಪ್ರಾಯ ಪಟ್ಟರು. ಅವರು ಮಿತ್ತಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಭಾಷಣ ಮಾಡಿದರು.
ಶಿಬಿರಾಧಿಕಾರಿ ನಮಿತಾ ಕೆ. ಆರ್. ಶಿಬಿರದ ವರದಿಯನ್ನು ವಾಚಿಸಿದರು. ಊರವರ ಪರವಾಗಿ ಶಿಬಿರ ನಿರ್ವಹಣಾ ಸಮಿತಿಯ ಅಧ್ಯಕ್ಷ ಹೈದರಾಲಿ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಾದ ಕುಶಾಲಪ್ಪ, ಜನಾರ್ಧನ ಮತ್ತು ಅಮೃತ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಶೇಷ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಮತ್ತು ಸ್ಮರಣಕೆ ನೀಡಿ ಗೌರವಿಸಲಾಯಿತು.
ಏಳು ದಿನಗಳ ಕಾಲ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸ್ವಚ್ಛತಾ ಆಂದೋಲನ, ನಶಾ ಮುಕ್ತ ಅಭಿಯಾನ, ತೆಂಗಿನ ಗಿಡಗಳ ನಾಟಿ, ರಸ್ತೆ ರಿಪೇರಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗೀತಾ ವಹಿಸಿದ್ದರು. ಮಿತ್ತಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯಚಂದ್ರ ಸೇನರೆಬೆಟ್ಟು, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮಿತ್ತಬಾಗಿಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಮಿತ್ತಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಕುಮಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಬಿರ್, ಶಿಬಿರ ನಿರ್ವಹಣಾ ಸಮಿತಿ ಅಧ್ಯಕ್ಷ ಹೈದರಾಲಿ, ಅಬ್ದುಲ್ ಅಜೀಜ್ ಮತ್ತು ಸಂಶುದ್ದೀನ್ ಉಪಸ್ಥಿತರಿದ್ದರು. ಪುರುಷೋತ್ತಮ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿ ವಿದ್ಯಾ ರಾವ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಪದ್ಮನಾಭ ಬಿ.ಕೆ. ವಂದಿಸಿದರು.