ಕೊಯ್ಯೂರು: ಮಲೆಬೆಟ್ಟಿನ ಶ್ರೀವನದುರ್ಗ ದೇವಸ್ಥಾನದಲ್ಲಿ ನಡೆದ ಶರನ್ನವರಾತ್ರಿಯ ಕೊನೆಯ ದಿವಸದ ವಿಜಯದಶಮಿಯಂದು ಶ್ರೀ ಪಂಚ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಯ್ಯೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತ್ರಿಶಂಕು ಸ್ವರ್ಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಭಾಗವತರಾಗಿ ವಿಷ್ಣುಪ್ರಸಾದ ಕಲ್ಲುರಾಯ, ಹಿಮ್ಮೇಳದಲ್ಲಿ ಚಂದ್ರಶೇಖರ ಗುರುವಾಯನಕೆರೆ ಮತ್ತು ಅಮೋಘ ಕುಂಟಿನಿ ಸಹಕರಿಸಿದರು. ಈ ಸಂದರ್ಭದಲ್ಲಿ 2025ನೇ ಶೈಕ್ಷಣಿಕ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಯಕ್ಷಗಾನ ಸಂಘದ ಸಂಚಾಲಕ ವಿಜಯಕುಮಾರ್ ಎಂ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಶಿಕ್ಷಕರಿಗೆ ಇರಬೇಕಾದ ಬಹುಮುಖ ಪ್ರತಿಭೆ ವಿಜಯಕುಮಾರ್ ಅವರಲ್ಲಿ ಕಾಣಬಹುದು. ಇವರು ಯಕ್ಷಗಾನದಂತಹ ಕಲೆಗಳಲ್ಲಿ ಆಸಕ್ತಿ, ಪಾಲ್ಗೊಳ್ಳುವಿಕೆ, ಕಲೆಯ ಸಂಘಟನೆ, ಪೋಷಣೆ ಹಾಗೂ ವಿದ್ಯಾರ್ಥಿಗಳಿಗೆ ಕಲೆಯ ಪರಿಚಯ ಮಾಡಿಕೊಡುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ.
ಶೈಕ್ಷಣಿಕವಾಗಿಯು ಸಮಾಜ ಮತ್ತು ಶಾಲೆಯ ಸಂಬಂಧವನ್ನು ಉತ್ತಮವಾಗಿ ಬೆಸೆದು ತಾನು ಕರ್ತವ್ಯ ನಿರ್ವಹಿಸುವ ಶಾಲೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಹಿರಿದಾದದು.” ಎಂದು ಪ್ರೊ. ಮಧೂರು ಮೋಹನ ಕಲ್ಲೂರಾಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ ಸನ್ಮಾನವನ್ನು ನಡೆಸಿಕೊಟ್ಟರು. ಸಂಘದ ಪದಾಧಿಕಾರಿಗಳಾದ ಬಾಸಮೆ ನಾರಾಯಣ ಭಟ್. ರಾಮಕೃಷ್ಣ ಭಟ್ ಉಜಿರೆ, ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ, ದೇವಸ್ಥಾನದ ಆಡಳಿತ ಮೊಕ್ತೇಸರ ಕಾಂತಾಜೆ ಗಣೇಶ್ ಭಟ್, ರವೀಂದ್ರನಾಥ ಮತ್ತಿತರರು ಉಪಸ್ಥಿತರಿದ್ದರು.