ಉಜಿರೆ: ‘ಗಾಂಧೀಜಿಯವರು ಜಗತ್ತು ಕಂಡ ಶಾಂತಿದೂತ. ಕೇವಲ ಮಾತುಗಳಲ್ಲಿ ಅಲ್ಲದೇ ಕ್ರಿಯೆಯ ಮೂಲಕ ವಿಶ್ವಕ್ಕೆ ಅಹಿಂಸಾ ಹಾಗೂ ಶಾಂತಿಯನ್ನು ಸಾರಿದವರು. ನಾವೆಲ್ಲರೂ ಅವರ ಹಾದಿಯಲ್ಲಿ ನಡೆಯಬೇಕು. ಸತ್ಯವು ಆ ಕ್ಷಣಕ್ಕೆ ಆತಂಕ ತಂದರೂ ಕೊನೆಗೆ ನೆಮ್ಮದಿ ಕೊಡುತ್ತದೆ. ಆದುದರಿಂದ ಕೊನೆವರೆಗೂ ನೆಮ್ಮದಿ ನೀಡದ ಸುಳ್ಳು ಒಳ್ಳೆಯದಲ್ಲ. ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸು ಎನ್ನುವ ರಾಷ್ಟ್ರಪಿತ ಗಾಂಧೀಜಿಯವರ ತತ್ವವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಬೇಕು’ ಎಂದು ದ್ವಿತೀಯ ಬಿ.ಎಡ್ ಪ್ರಶಿಕ್ಷಣಾರ್ಥಿ ಮೋಹನ್ ಕುಮಾರ್ ವಿ. ಹೇಳಿದರು. ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ( ಬಿ.ಎಡ್.) ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಸ್ವತಂತ್ರ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಕುರಿತು ಪ್ರಥಮ ಬಿ.ಎಡ್. ಪ್ರಶಿಕ್ಷಣಾರ್ಥಿ ಶ್ರವಣ ಮಹಾಪುರುಷ ಮಾತನಾಡಿ ‘ಶಾಸ್ತ್ರೀಯವರ ಜೀವನ ಚರಿತ್ರೆ ನಮಗೆಲ್ಲರಿಗೂ ಪ್ರೇರಕ. ದೇಶದ ಅಭಿವೃದ್ಧಿಗೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ವ್ಯಕ್ತಿ ಇವರಾಗಿದ್ದರು. ಇವರಿಂದ ಸ್ವಾಭಿಮಾನ ಹಾಗೂ ನೈಜ ಸ್ವಾತಂತ್ರ್ಯದ ಅರ್ಥವನ್ನು ನಾವು ತಿಳಿಯಬಹುದು. ಆಕರದಲ್ಲಿ ವಾಮನನಾಗಿ, ಆಡಳಿತದಲ್ಲಿ ತ್ರಿವಿಕ್ರಮನಾಗಿ ಕಂಡವರು. ಭಾರತ ಕಂಡ ಆಚಾರ ಸಂಪನ್ನ, ವಿಚಾರದಲ್ಲಿ ಚೊಕ್ಕ ಚಿನ್ನರಾದ ಇವರು ನಮಗೆಲ್ಲರಿಗೂ ಆದರ್ಶ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯಾರ್ಥಿ ನಾಯಕಿ ವೀಕ್ಷಾದೀಪ ಇವರು ಮಾತನಾಡುತ್ತಾ ‘ವಿದ್ಯಾರ್ಥಿಗಳು ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ತತ್ವಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಈ ಆಚರಣೆಗಳು ಪೂರ್ಣವಾಗಲು ಸಾಧ್ಯ. ಜೀವನದಲ್ಲಿ ಪ್ರೀತಿ ಹಂಚುತ್ತಾ ಬಾಳಿ, ಮಾನವ ಜನ್ಮವನ್ನು ಸಾರ್ಥಕಗೊಳಿಸಿ’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ವಿದ್ಯಾಶ್ರೀ ಪಿ., ಆಧ್ಯ ಯು., ವೀಕ್ಷಿತಾ ಎನ್. ಹಾಗೂ ಪ್ರಥಮ ಮತ್ತು ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಪ್ರೀತಿ ಮರಿಯಾ ಸ್ವಾಗತಿಸಿ, ವಿಶ್ವನಾಥ್ ಹಾಗೂ ಗಾಯತ್ರಿ ಅತಿಥಿ ಪರಿಚಯಿಸಿ, ಸುಪ್ರೀತ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾಂತೇಶ್ ರಾಥೋಡ್ ವಂದಿಸಿದರು.