ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜು, ಅರಮಲೆ ಬೆಟ್ಟ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ಗುರು ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು “ಶಿಕ್ಷಕರು ದೇವರ ಅದ್ಭುತ ಸೃಷ್ಟಿಗಳಲ್ಲೊಂದು, ತಂದೆ ತಾಯಿಗಳ ನಂತರ ದೇವರ ಸ್ಥಾನದಲ್ಲಿ ನಿಂತಿರುವವನೇ ಶಿಕ್ಷಕ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವವನು. ಶಿಲ್ಪಿ, ಶಿಲೆಯನ್ನು ಕಡೆದು ಸುಂದರ ಶಿಲ್ಪವನ್ನಾಗಿಸುವಂತೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸುಂದರ ಆಕಾರವನ್ನು ಕೊಡುತ್ತಾನೆ.JEE, NEET, CET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸಾಧನೆಯನ್ನು ಮಾಡಿದ್ದಾರೆ” ಎಂದು ಅವರು ಮಾತನಾಡಿದರು.

ಕರ್ನಾಟಕದ ಪ್ರತಿಷ್ಠಿತ ಮತ್ತು ಪ್ರತಿಭಾನ್ವಿತ ಉಪನ್ಯಾಸಕ ವರ್ಗ ನಮ್ಮ ಕಾಲೇಜಿನಲ್ಲಿದೆ ಎಂದು ತಮ್ಮ ಉಪನ್ಯಾಸಕ ವರ್ಗದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅದ್ಭುತ ಮತ್ತು ಆಕರ್ಷಕ ವೇದಿಕೆಯ ಮೇಲೆ ಆಯೋಜನೆಗೊಂಡಿದ್ದ ಈ ಗುರು ಗೌರವ ಕಾರ್ಯಕ್ರಮದಲ್ಲಿ ಆಡಳಿತ ಕಚೇರಿಯ ಸಿಬ್ಬಂದಿ, ಎಲ್ಲಾ ವಿಭಾಗಗಳ ಮುಖ್ಯಸ್ಥರನ್ನು ಒಳಗೊಂಡಂತೆ ಉಪನ್ಯಾಸಕ ವರ್ಗ, ಎಕ್ಸೆಲ್ ಟೆಕ್ನೋ ಸ್ಕೂಲ್ ನ ಶಿಕ್ಷಕರು, ನಿಲಯ ಪಾಲಕರು, ಬೋಧಕೇತರ ಸಿಬ್ಬಂದಿ, ವಸತಿ ನಿಲಯ ಹಾಗೂ ಭೋಜನಾಲಯ ಸಿಬ್ಬಂದಿ, ವಿವಿಧ ಮೇಲ್ವಿಚಾರಕರು ಹೀಗೆ ಪ್ರತಿಯೊಬ್ಬರಿಗೂ ಶಾಲು ಹೊದಿಸಿ ಸ್ಮರಣಿಕೆ ಮತ್ತು ಉಡುಗೊರೆಗಳನ್ನು ಕೊಡುವ ಮೂಲಕ ಸನ್ಮಾನಿಸಿದರು. ಪುಷ್ಪಾರ್ಚನೆ ಮತ್ತು ಆರತಿ ಬೆಳಗುವ ಮೂಲಕ ಉಪನ್ಯಾಸಕ ವರ್ಗಕ್ಕೆ ಗೌರವ ನಮನ ಸಲ್ಲಿಸಲಾಯಿತು.

ಗುರುನಮನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳ ಮೂಲಕ ಸರ್ವರನ್ನು ಸ್ವಾಗತಿಸಿದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸತ್ಯನಾರಾಯಣ ಭಟ್ ಅವರು ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಡಿರುವ ಅಪ್ರತಿಮ ಸಾಧನೆಗಳನ್ನು ಮನವರಿಕೆ ಮಾಡಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್, ಉಪ ಪ್ರಾಚಾರ್ಯ ರೋಹಿತ್, ಶೈಕ್ಷಣಿಕ ಸಂಯೋಜಕ ನಿಶಾ ಪೂಜಾರಿ, ಆಡಳಿತ ಅಧಿಕಾರಿ ಕೀರ್ತಿನಿಧಿಜೈನ್ , ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ಹಾಸ್ಟೆಲ್ ಮ್ಯಾನೇಜರ್ ಮಲ್ಲೇಶ್ ಜೈನ್, ಆಡಳಿತ ಮಂಡಳಿಯ ಸಹನಾ ಜೈನ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಚೇರಿ ಸಹಾಯಕಿ ಪ್ರಜ್ಞ ಕುಲಾಲ್ ಮತ್ತು ರಸಾಯನ ವಿಜ್ಞಾನ ವಿಭಾಗದ ಉಪನ್ಯಾಸಕ ಶಿವರಾಜ್ ಅವರು ನಿರೂಪಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಭಾಕರ್ ಅವರು ವಂದಿಸಿದರು.