ಬೆಳಾಲು: ಬೆಂಗಳೂರಿನ ಎಸ್. ಕೆ. ಜಿ. ಆಸರೆ ಫೌಂಡೇಶನ್ ವತಿಯಿಂದ ಸೆ. 27ರಂದು ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯಶ್ವರ ಭಜನಾ ಮಂದಿರದಲ್ಲಿ ಹಿರಿಯ ನಾಗರೀಕರಿಗೆ ಸಾಂತ್ವನ ಕಾರ್ಯಕ್ರಮ ನಡೆಯಿತು.
ಬೆಂಗಳೂರು ಎಸ್. ಕೆ.ಜಿ ಆಸರೆ ಫೌಂಡೇಶನ್ ನಿರ್ದೇಶಕಿ ಡಾ. ರತ್ನ ಕುಮಾರಿ ಎಸ್. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಸಂಸ್ಥೆಯ ಕಾರ್ಯಕ್ರಮಗಳಾದ ಮಾಹಿತಿ ಕಾರ್ಯಾಗಾರ, ಅರೋಗ್ಯ ತಪಾಸಣೆ, ಮಾನಸಿಕ, ಸಾಮಾಜಿಕ ಸ್ಥೈರ್ಯ, ಒಟ್ಟಾಗಿ ಒಂದು ದಿನ ಎಲ್ಲರೂ ಸೇರಿ ಸಂತೋಷದಿಂದ ಇರುವುದೇ ಇದರ ಉದ್ದೇಶ ಎಂದರು.
ಬೆಳಾಲು ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಗೌಡ ಎಸ್. ಮಾತನಾಡಿ ತಾನು ದುಡಿದ ಸಂಪಾದನೆಯಲ್ಲಿ ಹಿರಿಯ ನಾಗರೀಕರಿಗೆ ವಿನಿಯೋಗಿಸಿ ಊರಲ್ಲಿ ಮೊದಲ ಕಾರ್ಯಕ್ರಮ ಹಮ್ಮಿಕೊಂಡಿರುವ ಡಾ. ರತ್ನ ಕುಮಾರಿಯವರ ಯೋಜನೆಯನ್ನು ಹಿರಿಯ ನಾಗರೀಕರು ಸದುಪಯೋಗ ಪಡೆದುಕೊಳ್ಳಿ ಎಂದರು.
ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಪ್ರೇಮಾ ಕೃಷ್ಣಪ್ಪ ಗೌಡ ಮತ್ತು ಬೆಳಾಲು ಸಹಕಾರ ಸಂಘದ ಮಾಜಿ ನಿರ್ದೇಶಕ ವಿಜಯ ಗೌಡ ಎಸ್. ಹಿರಿಯ ನಾಗರೀಕರನ್ನು ಒಟ್ಟು ಕೂಡಿಸಲು ಸಹಕರಿಸಿದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಲೀಲಾ ಎಸ್. ಪ್ರಸ್ತಾವನೆಗೈದರು. ವಿಜಯ ಗೌಡ ಎಸ್. ಸ್ವಾಗತಿಸಿ, ಪ್ರೇಮಾ ಕೃಷ್ಣಪ್ಪ ಗೌಡ ನಿರೂಪಿಸಿದರು. ಯೋಗೀಶ್ ಗೌಡ ಎಸ್. ವಂದಿಸಿದರು.