ಸಿರಿ ಕೇಂದ್ರ ಕಛೇರಿಯಲ್ಲಿ ‘ಸಮಗ್ರ ಆರೋಗ್ಯ ತಪಾಸಣಾ ಶಿಬಿರ’

0

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ಸಿರಿ ಕ್ಲಬ್’ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ-ಐ.ಸಿ.ಟಿ.ಸಿ ವಿಭಾಗ ಇವರ ಸಹಯೋಗದಲ್ಲಿ ಸಿರಿ ಸಂಸ್ಥೆಯ ಸಿಬ್ಬಂದಿಗಳಿಗೆ ‘ಸಮಗ್ರ ಆರೋಗ್ಯ ತಪಾಸಣಾ ಶಿಬಿರ’ ಸೆ. 29ರಂದು ಬೆಳ್ತಂಗಡಿ ಸಿರಿ ಕೇಂದ್ರ ಕಚೇರಿಯಲ್ಲಿ ಜರುಗಿತು.

ಸಿರಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಛೇರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಅವರು ದೀಪ ಪ್ರಜ್ವಲಿಸಿ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್.ಜನಾರ್ಧನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಖಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೆ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಮುಂದಾಗುವ ಬಾರಿ ಅನಾಹುತವನ್ನು ತಪ್ಪಿಸಬಹುದಾಗಿದೆ. ನಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡಲ್ಲಿ ಅದನ್ನು ಗೌಪ್ಯವಾಗಿಡದೆ ಸಕಾಲದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವುದರಿಂದ ನಮ್ಮ ಅತ್ಯಮೂಲ್ಯ ಜೀವವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ನಮ್ಮ ಸಿರಿ ಸಂಸ್ಥೆಯಲ್ಲಿ ಶೇ.90ರಷ್ಟು ಮಹಿಳಾ ಸಿಬ್ಬಂದಿಗಳೇ ಇದ್ದು, ಇಲ್ಲಿ ದುಡಿಯುವ ಪ್ರತಿಯೋರ್ವ ಮಹಿಳೆಯರೂ ಆರೋಗ್ಯವಾಗಿದ್ದಲ್ಲಿ, ಆಕೆಯ ಕುಟುಂಬ ಪರಿವಾರವೂ ಉತ್ತಮ ಆರೋಗ್ಯಪೂರ್ಣ ವಾತಾವರಣವನ್ನು ಹೊಂದಲು ಸಾಧ್ಯ. ಹಾಗಾಗಿ ಎಲ್ಲರೂ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸುವ ಮುಖಾಂತರ ಶಿಬಿರದ ಸದುಪಯೋಗವನ್ನು ಪಡೆದು ಆರೋಗ್ಯವಂತರಾಗಿ ಬಾಳಿ ಎಂದು ಶುಭ ಹಾರೈಸಿದರು. ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡಿಯವರ ಆಶ್ರಯದಲ್ಲಿ ನಡೆಯುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಮಹತ್ವಪೂರ್ಣವಾದ ಆರೋಗ್ಯ ಶಿಬಿರವನ್ನು ಆಯೋಜಿಸಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ, ಸಿರಿ ಕ್ಲಬ್ ನ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಇತ್ಯಾದಿ ಯಾವುದೇ ಖಾಯಿಲೆಗಳು ಬಂದ ನಂತರ ಅದಕ್ಕೆ ಚಿಕಿತ್ಸೆ ಪಡೆಯುವ ಬದಲಾಗಿ, ಈ ಖಾಯಿಲೆಗಳನ್ನು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಹಾಗಾಗಿ ಸಿರಿ ಸಿಬ್ಬಂದಿಗಳ ಮೇಲೆ ವಿಶೇಷ ಕಾಳಜಿ ಹೊಂದಿರುವ ಸಿರಿ ಎಂ.ಡಿಯವರ ಮಾರ್ಗದರ್ಶನದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಐ.ಸಿ.ಟಿ.ಸಿ ವಿಭಾಗದ ಸಹಯೋಗದಲ್ಲಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ಸಹಕಾರದಲ್ಲಿ ಈ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮನೀಷಾ, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಲೀಲಾವತಿ, ಐ.ಟಿ.ಸಿ.ಟಿ ಆಪ್ತ ಸಮಾಲೋಚಕ ಧರ್ಮಪಾಲ್, ಬಿ.ಪಿ.ಎಂ. ಅಜೇಯ್, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಸುಮಾರು 136 ಮಂದಿ ಸಿರಿ ಸಿಬ್ಬಂದಿಗಳು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

ಸಿರಿ ಕ್ಲಬ್ ಕಾರ್ಯದರ್ಶಿ ವಿನ್ಸೆಂಟ್ ಲೋಬೋ ಸ್ವಾಗತಿಸಿ, ಸಿರಿ ಗೋದಾಮು ಪ್ರಬಂಧಕ ಜೀವನ್ ಕಾರ್ಯಕ್ರಮ ನಿರೂಪಿಸಿ, ಸಿರಿ ಕ್ಲಬ್ ಅಧ್ಯಕ್ಷೆ ಹರ್ಷಿತಾ ಅವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here