ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಷಡ್ಯಂತ್ರವನ್ನು ವಿರೋಧಿಸಿ ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತವೃಂದದ ಪರವಾಗಿ ಸೆ.28ರಂದು ಮಹಾ ಚಂಡಿಕಾಹೋಮ ನಡೆಯಿತು.
ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ನಡೆದ ಚಂಡಿಕಾ ಹೋಮಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ವತಿಯಿಂದ ಫಲ-ಪುಷ್ಪಗಳ ಸಮರ್ಪಣೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ತಾಲೂಕಿನ ಭಕ್ತವೃಂದವನ್ನು ಧರ್ಮಸ್ಥಳದ ದ್ಚಾರದ ಬಳಿ ಸ್ವಾಗತಿಸಿದ ನಂತರ ಭವ್ಯ ಮೆರವಣಿಗೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಚಂಡಿಕಾ ಹೋಮದ ಪೂರ್ಣಾಹುತಿ ನಡೆಯಿತು.

ಪೂರ್ಣಾಹುತಿ ಬಳಿಕ ನಡೆದ ಬೃಹತ್ ಸತ್ಯದರ್ಶನ ಸಮಾವೇಶದಲ್ಲಿ ತಾಲೂಕಿನ ಜನತೆಯನ್ನು ಉದ್ದೇಶಿಸಿ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಮಾತನಾಡಿ “
ಭಕ್ತರು ಏರ್ಪಡಿಸಿದ ಚಂಡಿಕಾ ಹೋಮ ನೋಡಿ ಸಂತೋಷವಾಗಿದ್ದೇನೆ.
ಹೋಮದ ಜೊತೆ ಮಳೆ ಬರುತ್ತಿದೆ ಅಂದರೆ ದೇವರಿಗೆ ತೃಪ್ತಿಯಾಗಿದೆ ಅಂತ ಅರ್ಥ.ಹಿಂದೆಯೇ ಸತ್ಯದರ್ಶನ ಆಗಿದೆ,ಇದು ಅಕಸ್ಮಾತ್ ಅಲ್ಲ.ಚಂಡಿಕಾ ಹೋಮದಿಂದ ನಿಮ್ಮ ಮನೆಯ ಕಷ್ಟಗಳು ಪರಿಹಾರವಾಗಲಿ.

ಇಲ್ಲಿ ಮಾಡಿರುವ ಸೇವೆಗೆ ನಾವು ಕೃತಜ್ಞರಾಗಿದ್ದೇವೆ.ಕ್ಷೇತ್ರದಿಂದ ಹಲವರ ಬಡತನ ದೂರವಾಗಿದೆ ಅಂತ ಹೇಳಿದ್ದೀರಿ, ಆದರೆ
ಹೃದಯ ಬಡತನ ದೂರವಾಗಬೇಕಾದರೆ ಸಾಧನೆ ಮಾಡಬೇಕು.ನಮ್ಮೂರಿನವರು,ನಮ್ಮ ತಾಲೂಕು,ಜಿಲ್ಲೆಯವರು ಯಾಕೆ ಬರ್ಲಿಲ್ಲ ಅನ್ನುವ ಭಾವನೆ ಇತ್ತು ಅದನ್ನು ದೂರ ಮಾಡಿದ್ದೀರಿ.ಎಸ್ ಐ ಟಿ ಮಾಡಿದ್ದರಿಂದ ಸತ್ಯ ಹೊರಗೆ ಬಂದಿದೆ,ಸರ್ಕಾರಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.ಕ್ಷೇತ್ರವನ್ನು ಮುಗಿಸಬೇಕು, ಜನ ಬರಬಾರದು ಅನ್ನುವ ಷಡ್ಯಂತ್ರ ಮಾಡಿದರು, ಆದರೆ ಮಂಜುನಾಥ ಅಣ್ಣಪ್ಪನ ಮುಂದೆ ಇದು ಯಾವುದು ನಡೆಯಲ್ಲ.ಚಿನ್ನವನ್ನು ಬೆಂಕಿಗೆ ಹಾಕಿದಂತೆ ಧರ್ಮಸ್ಥಳ ಮತ್ತಷ್ಟು ಹೊಳಪು ಪಡೆಯಲಿದೆ.
ಕ್ಷೇತ್ರದಿಂದ ಬಹಳಷ್ಟು ಕೆಲಸ ಮಾಡುತ್ತೇವೆ,ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ.ಕೆಲ ದಿನಗಳಿಂದ ತಲೆ ಸ್ತಬ್ಧವಾಗಿತ್ತು ಈಗ ಮತ್ತೆ ತಲೆ ಓಡುತ್ತಿದೆ, ಮತ್ತಷ್ಟು ಕಾರ್ಯಕ್ರಮ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಸತ್ಯದರ್ಶನ ಸಮಾವೇಶದ ಕುರಿತು ಡಾ.ಪ್ರದೀಪ್ ನಾವೂರ ಮಾತನಾಡಿದರು.ಸ್ವಾಗತದ ಜೊತೆ ಪ್ರಾಸ್ತಾವಿಕವಾಗಿ ಸುಬ್ರಹ್ಮಣ್ಯಕುಮಾರ್ ಅಗರ್ತ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಡಿ.ಹೇಮಾವತಿ ವಿ.ಹೆಗ್ಗಡೆ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೋಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಆಳ್ಚಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಎಸ್ ಡಿ ಎಂ ವಿದ್ಯಾರ್ಥಿಗಳು ನೆರವೇರಿಸಿದ್ರೆ, ಸತ್ಯದರ್ಶನ ಸಮಾವೇಶದ ತಾಲೂಕು ಸಂಚಾಲಕ ಸುಬ್ರಹ್ಮಣ್ಯ ಕುಮಾರ್ ಅಗರ್ತ ಸ್ವಾಗತಿಸಿದರು. ಡಾ.ಸುವಿರ್ ಜೈನ್ ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು. ಪ್ರಸಾದ್ ಬಿ.ಎಸ್. ಧನ್ಯವಾದವಿತ್ತರು.