ಅರಸಿನಮಕ್ಕಿ : 2047ಕ್ಕೆ ಭಾರತ ಸರ್ವಕ್ಷೇತ್ರದಲ್ಲೂ ವಿಶ್ವದ ನಂ.1 ರಾಷ್ಟ್ರವಾಗಿ ಪರಿವರ್ತನೆಯಾಗಬೇಕೆಂಬ ಗುರಿ ಇದ್ದು ಯುವ ಸಮೂಹ ತಂಬಾಕು ಉತ್ಪನ್ನಗಳು, ಮದ್ಯ, ಡ್ರಗ್ಸ್ ಮೊದಲಾದ ಚಟಗಳಿಗೆ ದಾಸರಾಗಬಾರದು. ವ್ಯಸನಗಳಿಗೆ ಅಂಟಿದರೆ ಮನೆ ಮಂದಿ, ಸಮಾಜ ಹೀಗೇ ಎಲ್ಲರೂ ತಾತ್ಸಾರದಿಂದ ನೋಡಿ ತಿರಸ್ಕರಿಸುತ್ತಾರೆ, ಪ್ರತಿಭೆಗಳು ಕಮರುತ್ತವೆ ಎಂದು ಅರಸಿನಮಕ್ಕಿಯ ಅರಿವು ಕೇಂದ್ರದ ಗೌರವ ಸದಸ್ಯ ವೃಷಾಂಕ್ ಖಾಡಿಲ್ಕರ್ ಹೇಳಿದರು.
ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯತ್ ನ ಅರಿವು ಕೇಂದ್ರ ಸಹಯೋಗದಲ್ಲಿ ಸೆ. 19ರಂದು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ’ವ್ಯಸನಮುಕ್ತ ಭಾರತ’ ಕುರಿತು ಅವರು ಉಪನ್ಯಾಸ ನೀಡಿದರು.
ವಿದ್ಯಾರ್ಥಿ ಜೀವನವನ್ನು ಅಮಲುಪದಾರ್ಥ ಮುಕ್ತವಾಗಿಸಿಕೊಂಡರೆ ಮುಂದೆ ಜೀವನ ತುಂಬಾ ಸುಲಭ. ದುಶ್ಚಟಗಳಿಗೆ ಬಲಿಯಾಗದೆ ಪಂಚೇಂದ್ರಿಯಗಳು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಎಂದರು.

ಮಹಿಳಾ ಲೇಖಕಿ ರೇಣುಕಾ ಸುಧೀರ್ ಮಾತನಾಡಿ, ಹದಿಹರೆಯದಲ್ಲಿ ದೈಹಿಕ, ಮಾನಸಿಕ ಬೆಳವಣಿಗೆಗಳ ಜೊತೆಗೆ ಆತ್ಮವಿಶ್ವಾಸ, ಸ್ನೇಹ, ಆಕರ್ಷಣೆ, ಅತಿ ಆತ್ಮವಿಶ್ವಾಸ, ಖಿನ್ನತೆ, ಕೀಳರಿಮೆ ಹೀಗೆ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳೂ ಬೆಳೆಯುತ್ತವೆ.
ಅವುಗಳಲ್ಲಿ ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದುವುದನ್ನು ಮಾತ್ರ ಮಕ್ಕಳು ಸ್ವೀಕರಿಸಬೇಕು. ಶಿಕ್ಷಕರು, ಹಿರಿಯರ ಮಾತು, ಸಲಹೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯಅಧ್ಯಾಪಕ ಮಂಜುಳಾ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಧನಿಕ್ಷಾ ಪ್ರಾರ್ಥಿಸಿ, ವಿಜ್ಞಾನ ಶಿಕ್ಷಕಿ ಚೇತನಾ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಶಿಕ್ಷಕಿ ಚೇತನಾ ಕುಮಾರಿ ವಂದಿಸಿದರು.