ಬೆಳ್ತಂಗಡಿ: ನೈನಾಡು ಶ್ರೀ ರಾಮ ಭಜನಾ ಮಂದಿರದ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಬದ್ಯಾರು ಎಲ್.ಎಂ. ಪಿಂಟೋ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನೈನಾಡಿನ ಶ್ರೀ ರಾಮ ಸಭಾ ಭವನದಲ್ಲಿ ನಡೆಸಲಾಯಿತು. ಈ ಶಿಬಿರದಲ್ಲಿ ಜನರಲ್ ತಪಾಸಣೆ, ಇ.ಸಿ.ಜಿ. ಮಕ್ಕಳ ತಜ್ಙರ ವಿಭಾಗ, ಸ್ತ್ರೀ ರೋಗ ಚಿಕಿತ್ಸಾ ವಿಭಾಗ, ಕ್ಯಾನ್ಸರ್ ತಪಾಸಣಾ ವಿಭಾಗಗಳ ಪ್ರಯೋಜನವನ್ನು ಸುಮಾರು 166ರಷ್ಟು ಜನರು ಪಡಕೊಂಡಿರುತ್ತಾರೆ. ಬದ್ಯಾರು ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ಹಾಗೂ ಶಸ್ತ್ರ ಚಿಕಿತ್ಸಾ ತಜ್ಞ ಎಲ್ರಾಯ್ ಸಲ್ದಾನ್ಹ ಹಾಗೂ ಆಡಳಿತ ಸಹಾಯಾಧಿಕಾರಿ ಸವಿತಾ, ಭಜನಾ ಮಂದಿರದ ಗೌರವಾಧ್ಯಕ್ಷ ಜಾರಪ್ಪ ಪೂಜಾರಿ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ರತ್ನಾಕರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ವೇದಿಕೆಯ ಕಾರ್ಯಕ್ರಮದಲ್ಲಿ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಜಾರಪ್ಪ ಪೂಜಾರಿ, ನೈನಾಡು ಸಂತ ಫ್ರಾನ್ಸಿಸ್ ಅಸಿಸ್ಸಿ ಚರ್ಚ್ ಧರ್ಮಗುರು ಅನಿಲ್ ಅವಿಲ್ಡ್ ಲೋಬೋ, ಬದ್ಯಾರು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತಾ, ತಜ್ಞ ವೈದ್ಯ ಎಲ್. ರಾಯ್ ಸಲ್ದಾನ, ಆಡಳಿತ ಸಹಾಯಾಧಿಕಾರಿ ಸವಿತಾ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೋ, ಲೀಲಾವತಿ ಪದ್ಮನಾಭ ಶೆಟ್ಟಿ ಕೆರೆ ಕೋಡಿ, ಯುವಕ ಸಂಘದ ಕಾರ್ಯದರ್ಶಿ ಗಣೇಶ್ ಹೆಗ್ಡೆ ಮಿತ್ತಬೆಟ್ಟು, ಗೆಳೆಯರ ಬಳಗ ಸೇವಾ ಸಂಸ್ಥೆಯ ಪ್ರವೀಣ್ ಕ್ರಾಸ್ತಾ, ಕೆಥೋಲಿಕ್ ಸಭಾ ನೋಯೆಲ್ ಡಿಸೋಜಾ, ಕೆಥೋಲಿಕ್ ಯುವ ಸಂಚಾಲನದ ಉಪಾಧ್ಯಕ್ಷೆ ಕೀರ್ತಿ ಪ್ರೀಯಾ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆಯ ವಿವಿಧ ಸೇವೆಗಳ ಕುರಿತಾಗಿ ಆಡಳಿತ ಕಾರ್ಯನಿರ್ವಹಣಾಧಿಕಾರಿ ಸವಿವರವಾದ ಮಾಹಿತಿಯನ್ನು ನೀಡಿದರು. ಖ್ಯಾತ ಸರ್ಜರಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ತಜ್ಞ ಎಲ್. ರಾಯ್ ಪಿಂಟೋ ಅವರು ಕ್ಯಾನ್ಸರ್ ಕಾಯಿಲೆಯ ಕುರಿತಾದ ಮಾಹಿತಿಯನ್ನು ಪ್ರೋಜೆಕ್ಟರ್ ಚಿತ್ರಗಳ ಮುಖೇನ ಪರಿಣಾಮಕಾರಿಯಾಗಿ ನೀಡಿದರು.
ನೈನಾಡು ಚರ್ಚ್ ನ ಧರ್ಮಗುರು ಜನರಿಗೆ ಆರೋಗ್ಯದ ಮಹತ್ತರತೆಯನ್ನು ಹಾಗೂ ಶಿಬಿರದ ಪ್ರಯೋಜನ ಪಡೆಯುವಂತೆ ಹಿತ ನುಡಿಗಳನ್ನು ಆಡಿದರು. ಗ್ರಾಮ ಪಂಚಾಯತಿ ಸದಸ್ಯ ನೆಲ್ವಿಸ್ಟರ್ ಅವರು ಜನರಲ್ಲಿ ಸ್ವಚ್ಚತೆಯ ಬಗ್ಗೆ, ಸ್ವಚ್ಛ ಪರಿಸರದೊಂದಿಗೆ ಉತ್ತಮ ಆರೋಗ್ಯ ಪಡೆಯುವಂತೆ ಜನರಲ್ಲಿ ಮನವಿ ಮಾಡಿದರು. ಯುವಕ ಸಂಘ, ಗೆಳೆಯರ ಬಳಗ , ಇನ್ನಿತರ ಸಂಘಟನೆಗಳ ಪ್ರಮುಖರು ಶುಭ ಹಾರೈಸಿದರು.

ನೈನಾಡು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ಅಧ್ಯಕ್ಷೆ ಜಯಲಕ್ಷ್ಮೀ ರಾಘವ ಹೆಗ್ಡೆ, ಹಾಗೂ ನೈನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಶೀಂದ್ರ ಶೆಟ್ಟಿ ಅಂಗರ್ಜಾಲು, ನಿವೇದಿತಾ ಮಾತೃ ಮಂಡಳಿಯ ಕಾರ್ಯದರ್ಶಿ ದಿವ್ಯಾ ವಿಜಯ್ ರವರು ಉಪಸ್ಥಿತರಿದ್ದರು. ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.