ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಬೆಳ್ತಂಗಡಿ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮುಂಡಾಜೆ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಕುಕ್ಕಾವು, ಜನಜಾಗೃತಿ ಸಮಿತಿ ಕುಕ್ಕಾವು ಇದರ ಸಹಕಾರದೊಂದಿಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಜಿರೆ ಎಸ್.ಡಿ. ಎಂ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕುಕ್ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಕೂಡಬೆಟ್ಟು ಸದಾಶಿವೇಶ್ವರ ದೇವಸ್ಥಾನದ ಮೊಕೇಸರ ವಾಸುದೇವ ಕಕ್ಕನೇಜಿ ಶಿಬಿರವನ್ನು ಉದ್ಘಾಟಿಸಿದರು. ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲ್ವಿಚಾರಕ ರವೀಂದ್ರ ಗುಡಿಗಾರ್ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯಕೀಯ ಸೇವೆಗಳ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷ ವಿನಯಚಂದ್ರ ಗೌಡ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿ ಯಶೋಧರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಮಾಂಜ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ನೋಣಯ್ಯ ಗೌಡ, ಬಂಗಾಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಆನಂದ ಗೌಡ, ಒಕ್ಕೂಟದ ಅಧ್ಯಕ್ಷ ಜಗದೀಶ್ ಕುಂಬಾರ ಮತ್ತು ಸುರೇಶ್, ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಲೋಕೇಶ್ ಕುಂಬಾರು ಉಪಸ್ಥಿತರಿದ್ದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಪ್ರತೀತ್, ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ರಜತ್, ಕಣ್ಣಿನ ತಜ್ಞ ಡಾ. ಕುಭಾಶ್ಚಂದ್ರ, ಇ.ಎನ್.ಟಿ ತಜ್ಞ ಡಾ. ರೋಹನ್ ದೀಕ್ಷಿತ್, ಜನರಲ್ ಫಿಸಿಷಿಯನ್ ಡಾ. ಪೌಸ್ಟಿಲ್ ಮತ್ತು ಡಾ.ಆದರ್ಶ ತಪಾಸಣೆಯನ್ನು ನಡೆಸಿಕೊಟ್ಟರು. 504 ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ತ್ರಿವೇಣಿ ಸ್ವಾಗತಿಸಿ, ಸೇವಾಪ್ರತಿನಿಧಿ ರಶ್ಮಿ ಸುರೇಖಾ ಹಾಗೂ ಶೌರ್ಯವಿಪತ್ತು ನಿರ್ವಹಣಾ ಘಟಕದ ಮತ್ತು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಶಿಬಿರದ ಯಶಸ್ವಿಗೆ ಸಹಕರಿಸಿದರು. ವಲಯ ಮೇಲ್ವಿಚಾರಕ ಜನಾರ್ದನ್ ಧನ್ಯವಾದ ಅರ್ಪಿಸಿದರು.