ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಪರಿವರ್ತನೆ ಹುಟ್ಟುಹಾಕಿದ ಹರಿಕಾರ. ಹಿಂದೂ ಸಮಾಜದಲ್ಲಿರುವ ಜಾತೀಯ ವ್ಯವಸ್ಥೆಗಳನ್ನು ಎಲ್ಲಾ ಜಾತಿ, ಮತ ಸಮಾನವಾಗಿರಬೇಕೆಂದು ಕಟ್ಟಕಡೆಯ ಜನಾಂಗಕ್ಕೂ ಪ್ರಾಮಾಣಿಕ ನೆಲೆಯಲ್ಲಿ ತೋರಿಸಿಕೊಟ್ಟವರು ನಾರಾಯಣ ಗುರುಗಳು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿ, ಬೆಳ್ತಂಗಡಿ ತಾಲೂಕು ಆಶ್ರಯದಲ್ಲಿ ಸೆ.7 ರಂದು ಗುರುವಾಯನಕೆರೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಸಂದರ್ಭದಲ್ಲಿ ಧಾರ್ಮಿಕ ಪರಿವರ್ತನೆ ಹುಟ್ಟುಹಾಕಿದವರು. ಸಮಾನತೆಯ ಮೂಲ ಆಶಯದೊಂದಿಗೆ ಜೀವನವನ್ನು ಮುಡಿಪಾಗಿಟ್ಟವರು. ಪ್ರತಿ ವರ್ಷ ತಾಲೂಕು ಮಟ್ಟದ ಬೇರೆ ಬೇರೆ ಆಚರಣೆಗಳು ವಿದ್ಯಾರ್ಥಿಗಳ ಮಟ್ಟದಲ್ಲಿ ಒಂದೊಂದು ಕಾಲೇಜುಗಳಲ್ಲಿ ಮಾಡಬೇಕು.
ಇದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂಬ ಚಿಂತನೆ ಮಾಡಲಾಗಿದೆ. ನಾರಾಯಣ ಗುರು ಜಯಂತಿಯನ್ನು ವಿದ್ಯಾರ್ಥಿಗಳ ಮಧ್ಯೆ ನಡೆಸಿ ಮಹಾನ್ ಪುರುಷರ ವ್ಯಕ್ತಿತ್ವ ಪಸರಿಸಬೇಕು ಎಂಬ ನೆಲೆಯಲ್ಲಿ ಇಂದಿನಿಂದಲೇ ಆರಂಭಿಸಿದೆವು. ಈ ಮೂಲಕ ಅವರ ವ್ಯಕ್ತಿತ್ವ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ಭಗವಂತ ಚಾತುರ್ವರ್ಣಗಳಾದ ಬ್ರಹ್ಮಾಣ, ಕ್ಷತ್ರಿಯ, ವೈಷ್ಣವ, ಶೂದ್ರ ಎಂದು ವೃತ್ತಿಯ ಆಧಾರದಲ್ಲಿ ಸೃಷ್ಟಿಸಿದರು. ಸತ್ವ, ದಮ- ರಜ ವರ್ಣಾಶ್ರಮಗಳಿಂದ ಮನುಷ್ಯ ಗುರುತಿಸಲ್ಪಡುತ್ತದೆ. ಭಾರತೀಯ ಸನಾತನ ಪರಂಪರೆಯಲ್ಲಿರುವ ಜೀವನ ಮೌಲ್ಯಗಳು ಸಾಂಸ್ಕೃತಿಕವಾಗಿ ಎಷ್ಟು ಶ್ರೀಮಂತವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ಹಾಗಾಗಿ ವಿದ್ಯಾರ್ಥಿಗಳು ಮೂಢನಂಬಿಕೆಗಳನ್ನು ಕಿತ್ತೊಗೆದು ನೂರಾರು ವರ್ಷದ ಪರಂಪರೆಗೆ ಗೌರವ ನೀಡಬೇಕು ಎಂದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ದಿವಾಕರ ಕೆ. ಪ್ರಧಾನ ಭಾಷಣ ಮಾಡಿ, ನಾಡಿನಲ್ಲಿ ಅನೇಕ ಮಹಾತ್ಮರು ಹುಟ್ಟಿ ಬಂದಿದ್ದಾರೆ. ಅದರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಕ್ಷಾತ್ ದೈವೀಸಂಭೂತರು. ನಾವೆಲ್ಲರೂ ಇದೇ ಜಾತಿ, ಪಂಥದಲ್ಲಿ ಹುಟ್ಟಬೇಕು ಎಂದುಕೊಂಡು ಹುಟ್ಟಿದವರಲ್ಲ. ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಜಾತಿ ಪದ್ಧತಿಗೆ ಅಂಟಿಕೊಂಡಿದ್ದೇವೆ. ಆದರೆ ನಾರಾಯಣ ಗುರುಗಳು ಸಮಾನತೆಗಾಗಿ ದೇವಸ್ಥಾನ, ವಿದ್ಯಾಭ್ಯಾಸದಿಂದ ಮೂಢನಂಬಿಕೆ ಹೋಗಲಾಡಿಸುವುದು, ಸ್ವಾವಲಂಬಿಯಾಗಿ ಬದುಕಲು ಉದ್ಯೋಗ ಸ್ಥಾಪಿಸಬೇಕು ಎಂಬ ಸಂದೇಶ ಸಾರಿದವರು. ಹಾಗಾಗಿ ನಮ್ಮ ನಾಡಿನ, ನೆಲದ ಸತ್ವವನ್ನು ತಿಳಿಯೋಣ ಎಂದರು.
ತಹಶೀಲ್ದಾರ್ ಪೃಥ್ವಿ ಸಾನಿಕಮ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ., ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಉಪಾಧ್ಯಕ್ಷ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಸಹಕಾರಿ ಸಂಘಗಳ ಉಪನಿಬಂಧಕ ಬಿ.ವಿ.ಪ್ರತಿಮಾ ಸಹಿತ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್ ಸ್ವಾಗತಿಸಿದರು. ಲಾಯಿಲ ಕರ್ನೋಡಿ ಶಾಲೆ ಶಿಕ್ಷಕಿ ಮಮತಾ ನಿರೂಪಿಸಿದರು.