ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯಲ್ಲಿ ಸೆ.7ರಂದು ಬೆಳಿಗ್ಗೆ ಸರಣಿ ಅಪಘಾತ ನಡೆದಿದೆ. ಘಟನೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಾಟಿಯ ಎರಡನೇ ತಿರುವಿನ ಬಳಿ ಕೊಟ್ಟಿಗೆಹಾರ ಕಡೆ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ, ಉಜಿರೆ ಕಡೆ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗ್ಯಾಸ್ ಸಿಲಿಂಡರ್ ಲಾರಿಯ ಹಿಂಬದಿ ಬರುತ್ತಿದ್ದ ಇನ್ನೊಂದು ಲಾರಿ
ಗ್ಯಾಸ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು.
ಘಟನೆಯಿಂದ ಸುಮಾರು ಎರಡು ತಾಸು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನ ಸವಾರರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಹಾಗೂ ಸ್ಥಳೀಯರು ಸೇರಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕೈಗೊಂಡರು.
ಅಪಘಾತ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದ ಕಾರಣ ಮಾಹಿತಿ ತಿಳಿಸಲು ತಡವಾಯಿತು. ಭಾನುವಾರವಾದ ಕಾರಣ ಘಾಟಿ ಪರಿಸರದಲ್ಲಿ ಹೆಚ್ಚಿನ ವಾಹನ ಸಂಚಾರವು ಇತ್ತು.