ಡಿ.22 ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ – ರೂ. 1.50ಕೋಟಿ ವೆಚ್ಚ ದಲ್ಲಿ ನವೀಕರಿಸಿದ ಚರ್ಚ್ – ವರ್ಣರಂಜಿತ ಚರ್ಚ್ ಮುಖ್ಯ ಗೋಪುರ – ಪತ್ರಿಕಾ ಗೋಷ್ಠಿ

0

ಉಜಿರೆ: ಪವಾಡ ಪುರಷರೆಂದು ಹೆಸರುವಾಸಿಯಾದ ಪಾದುವಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆಯ ಕ್ರೈಸ್ತ ದೇವಾಲಯವು ದುರಸ್ತಿ ಹಾಗೂ ನವೀಕರಣಗೊಂಡು ಆಶೀರ್ವಚನಗೊಳ್ಳಲು ಸಿದ್ಧವಾಗಿ ನಿಂತಿದೆ ಎಂದು ಡಿ. 16ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಂ. ಫಾ. ಅಬೆಲ್ ಲೋಬೊ ಮಾಹಿತಿ ನೀಡಿದರು.

ಚರ್ಚ್‌ನ ಹಿನ್ನೆಲೆ:1969ರ ತನಕ ಉಜಿರೆ ಪರಿಸರದ ಕ್ರೈಸ್ತ ವಿಶ್ವಾಸಿಗಳು ಬೆಳ್ತಂಗಡಿಯ ಹೊಲಿ ರೆಡಿಮರ್ ಧರ್ಮಕೇಂದ್ರಕ್ಕೆ ತೆರಳಿ ತಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಅಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲಿ ಧರ್ಮಗುರುಗಳಾಗಿದ್ದ ವಂದನೀಯ ಇ.ಪಿ.ಡಾಯಸ್‌ರವರು ನಮ್ಮ ಜನರ ಕಷ್ಟಗಳನ್ನು ಮನಗಂಡು ಉಜಿರೆಯಲ್ಲೇ ಒಂದು ಚರ್ಚ್ ನಿರ್ಮಿಸಬೇಕೆಂದು ಕನಸು ಕಂಡರು. ಆದರೆ ಅವರಿಗೆ ಹಣಕಾಸಿನ ಕೊರತೆ ಎದುರಾಯಿತು.

ಅಂತಹ ಸಂದರ್ಭದಲ್ಲಿ ತನ್ನ ಪೂರ್ವಾಶ್ರಮದ ಸಹೋದರರು ತಮಗೆ ನೀಡಿದ ಸಂಪಾಜೆಯ ಪಾಲಿನ ಅಸ್ತಿಯನ್ನು ಮಾರಾಟ ಮಾಡಿ ಆ ಹಣದಿಂದಉಜಿರೆಯ ಚರ್ಚ್ ನಿರ್ಮಿಸಿದರು. ಜತೆಗೆ ನಂತರದ ದಿನಗಳಲ್ಲಿ ತಾಲೂಕಿನಲ್ಲಿಯೇ ಪ್ರಥಮವಾಗಿ ಆಂಗ್ಲ ಮಾದ್ಯಮ ಶಾಲೆ(ಅನುಗ್ರಹ)ಯನ್ನು ಆರಂಭಿಸಿದರು. ಆಗ ಉಜಿರೆಯಲ್ಲಿ 40 ಕ್ರೈಸ್ತ ಕುಟುಂಬಗಳಿದ್ದವು.ಜನಸಂಖ್ಯೆ ವೃದ್ಧಿಯಾದಂತೇ ಭಕ್ತಾದಿಗಳ ಅಗತ್ಯತೆಗಳಿಗೆ ಈ ಚರ್ಚ್ ಸಾಲದಾಯಿತು.

ಅದಕ್ಕಾಗಿ 1995ರಲ್ಲಿ ಧರ್ಮಗುರು ಆಂಡ್ರ ಡಿಸೋಜರವರ ನೇತ್ರತ್ವದಲ್ಲಿ ಹಾಗೂ ಭಕ್ತಾದಿಗಳ ಒಗ್ಗೂಡುವಿಕೆಯಿಂದ ಹೊಸ ಚರ್ಚ್ ಕಟ್ಟಡ ನಿರ್ಮಿಸಲಾಯಿತು. ಕಳೆದ 30 ವರ್ಷಗಳಿಂದ ಭಕ್ತಾದಿಗಳ ಆಧ್ಯಾತ್ಮಿಕ ಜೀವನಕ್ಕೆ ಈ ದೇವಾಲಯ ದಾರಿ ತೋರಿಸುತ್ತಿದೆ.

ಇತ್ತೀಚಿನ ವರುಷಗಳಿಂದ ಈ ಚರ್ಚ್‌ ಗೋಪುರವು ದುರ್ಬಲಗೊಂಡು ಕ್ಷೀಣಿಸುತ್ತಾ ಬಂದು ಈ ಗೋಪುರವನ್ನು ಪುನರ್ ನಿರ್ಮಿಸುವ ಜೊತೆಗೆ ದೇವಾಲಯದೊಳಗೆ ಸ್ಥಳದ ವಿಸ್ತರಣೆಯಾಗಬೇಕೆಂದು ಭಕ್ತಾದಿಗಳ ಬೇಡಿಕೆಯಾಗಿತ್ತು. ಪ್ರಸ್ತುತ ಧರ್ಮಗುರು ಆಬೆಲ್ ಲೋಬೊರವರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆ್ಯಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್ ಮತ್ತು ಪಾಲನಾ ಮಂಡಳಿಯ ಜೊತೆ ಹಾಗೂ ಭಕ್ತಾದಿಗಳ ಸಭೆ ಸೇರುವಿಕೆಯಿಂದ ದುರಸ್ತಿ ಕೆಲನವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.

ಮತ್ತು ಕೆಲಸವನ್ನು ಆರಂಭಿಸಲಾಯಿತು. ಈ ಯೋಜನೆಗೆ ಬೇಕಾಗುವ ಆರ್ಥಿಕ ಸಂಪನ್ಮೂಲವನ್ನು ಕ್ರೋಡಿಕರಿಸಲು ಸ್ಥಳೀಯ ಭಕ್ತರಿಂದ ಅಸಾಧ್ಯವಾಗಬಹುದೆಂದು ಮನಗಂಡು ಸಹಾಯ ನೀಡುವರೇ ಸರಕಾರವನ್ನು ವಿನಂತಿಸಲಾಯಿತು.

ಸರಕಾರವು ಸೂಕ್ತವಾಗಿ ಸ್ಪಂದಿಸಿ 50 ಲಕ್ಷ ರೂಪಾಯಿಗಳನ್ನು ಅಲ್ಪಸಂಖ್ಯಾತರ ಕೋಟಾದಿಂದ ಮಂಜೂರುಗೊಳಿಸಿತು. 25 ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿಸಿತು. ಸರಿಸುಮಾರು 1.20 ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿಯು ಕೇವಲ 10 ತಿಂಗಳಲ್ಲೇ ಸಂಪೂರ್ಣಗೊಂಡು ಡಿ.22ರಂದು ಆಶೀರ್ವಚನಗೊಳ್ಳಲು ಸಿದ್ಧವಾಗಿದೆ.

ನವೀಕೃತ ಚರ್ಚ್‌ನ ವಿಶೇಷತೆಗಳು: ಚರ್ಚ್‌ನ ಗೋಪುರದಲ್ಲಿ ನಿರ್ಮಿಸಿರುವ ಮೂರು ಶಿಲುಬೆಗಳಿಗೆ ಎಲ್.ಇ.ಡಿ. ವ್ಯವಸ್ಥೆಯನ್ನು ಮಾಡಲಾಗಿದೆ. ಗೋಪುರದ ಮಧ್ಯಭಾಗದಲ್ಲಿ ಲೋಹದಲ್ಲಿ ನಿರ್ಮಿಸಿ ತರಿಸಲಾದ ಸುಮಾರು ಹತ್ತು ಅಡಿ ಎತ್ತರದ ಸಂತ ಅಂತೋನಿಯವರ ಮೂರ್ತಿಯನ್ನು ಇಡಲಾಗಿದೆ. ಚರ್ಚ್‌ನ ಬಲಭಾಗದಲ್ಲಿ ವೆಲಂಕಣಿ ಮಾತೆಯ ಪ್ರತಿಮೆಯನ್ನೂ, ಎಡಭಾಗದಲ್ಲಿ ಸಂತ ಅಂತೋನಿಯವರ ಪ್ರತಿಮೆಯನ್ನೂ ಇಡಲಾಗಿದೆ. ಸ್ಥಾಪಕ ಧರ್ಮಗುರು ರೆ.ಫಾ.ಇ.ಪಿ.ಡಾಯನ್‌ರವರ ವುತ್ಥಳಿಯನ್ನು ಚರ್ಚ್ ವಠಾರದಲ್ಲಿ ರಚಿಸಲಾಗಿದೆ.

ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ. ಡಿ. 22ರಂದು ರೈ.ರೆ.ಡಾ.ಪೀಟರ್ ಪೌಲ್ ಸಲ್ದಾನ್ಹಾರವರು ಆಶೀರ್ವಚನ ನೀಡಿ ಬಲಿಪೂಜೆಯನ್ನು ಅರ್ಪಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿರುವರು.

ಈ ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷರೊಂದಿಗೆ, ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ವಾಲ್ಟರ್ ಡಿಮೆಲ್ಲೊರವರು, ಉಜಿರೆ ಧರ್ಮಕೇಂದ್ರದ ಧರ್ಮಗುರು ಆಬೆಲ್ ಲೋಬೋ ಹಾಗೂ ವಲಯದ ಮತ್ತು ಇನ್ನಿತರ ಗುರುಗಳು ಸಹಭಾಗಿಗಳಾಗಲಿರುವರು.

ಬಲಿಪೂಜೆಯ ಬಳಿಕ 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯ ಅತಿಥಿಗಳಾಗಲಿರುವರು. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ವಲಯದ ಪ್ರಧಾನ ಗುರು ವಾಲ್ಟರ್ ಡಿಮೆಲ್ಲೊ, ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟನ್ನಾಯ, ಎಮ್.ಎಲ್.ಸಿ. ಬೋಜೇಗೌಡ ಹಾಗೂ ಪ್ರತಾಪಸಿಂಹ ನಾಯಕ್, ಮೆಸ್ಕಾಂನ ಚೇರ್ಮನ್ ಹರೀಶ್ ಕುಮಾರ್. ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಿರಣ್ ಕಾರಂತ್. ಕೆ.ಪಿ.ಸಿ.ಸಿ. ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾಧಿಕಾರಿ ಜಿನೇಂದ್ರ ಎಂ, ಉಜಿರೆ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಅಬೂಬಕ್ಕರ್ ಯು.ಹೆಚ್. ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಭಾ ಕಾರ್ಯಕ್ರಮದಲ್ಲಿ ದಾನಿಗಳಿಗೆ ಗೌರವಿಸುವ, ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ. ಸಂಜೆ ತುಳು ಹಾಸ್ಯ ಮಯ ನಾಟಕ ಎನ್ನನೆ ಕಥೆ ಪ್ರಧರ್ಶನಗೊಳ್ಳಲಿದೆ.

1500ಜನ ಕಾರ್ಯಕ್ರಮ ದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಧರ್ಮಗುರು ಫಾ. ಅಬೆಲ್ ಲೋಬೊ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಿಜಯ್ ಲೋಬೊ, ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಮಾಧ್ಯಮ ಪ್ರತಿನಿಧಿ ವಲೇರಿಯನ್ ಪಿಂಟೋ, ಆರ್ಥಿಕ ಸಮಿತಿ ಸದಸ್ಯರು ಪ್ರವೀಣ್ ವಿಜಯ್ ಡಿಸೋಜ, ಅರುಣ್ ಸಂದೇಶ್ ಡಿಸೋಜ, ಜಾನೆಟ್ ರೋಡ್ರಿಗಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here