ಬೆಳ್ತಂಗಡಿ: ಕೊಕ್ರಾಡಿ ಗ್ರಾಮದ ಕೊಕ್ರಾಡಿ ಬಳಿಯ ನಾರಾವಿ-ವೇಣೂರು ಸಾರ್ವಜನಿಕ ರಸ್ತೆಯಲ್ಲಿ ನಾರಾವಿ ಕಡೆಯಿಂದ ವೇಣೂರು ಕಡೆಗೆ ಬರುತ್ತಿದ್ದ 407 ಗೂಡ್ಸ್ ಮಿನಿ ಟಿಪ್ಪರ್ (ನಂಬ್ರ KA 70.4468)ನಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಧನಕೀರ್ತಿ ಎಂಬಾತನನ್ನು ಬಂಧಿಸಲಾಗಿದೆ.
ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೃಷ್ಣ ಅವರು ತಮ್ಮ ಸಹೋದ್ಯೋಗಿ ಸಂತೋಷ್ ಅವರೊಂದಿಗೆ ಗುಪ್ತವಾರ್ತೆ ಸಮಯದಲ್ಲಿ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಈ ವಾಹನವನ್ನು ತಡೆದು ನಿಲ್ಲಿಸಿ ಟಿಪ್ಪರ್ ಚಾಲಕನಲ್ಲಿ ಮರಳು ಸಾಗಾಟದ ಬಗ್ಗೆ ದಾಖಲೆ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇರಲಿಲ್ಲ. ಸದ್ರಿ ಮರಳನ್ನು ಸುಲ್ಕೇರಿ ಗ್ರಾಮದ ಸುಲ್ಕೇರಿ ಎಂಬಲ್ಲಿ ಹರಿಯುವ ನದಿಯಿಂದ ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ಚಾಲಕ ಧನಕೀರ್ತಿ ಈ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ವಾಹನವನ್ನು ಪರಿಶೀಲಿಸಿದ ವೇಳೆ ಅದರಲ್ಲಿ ಸುಮಾರು ಒಂದೂವರೆ ಯೂನಿಟ್ ಮರಳು ಪತ್ತೆಯಾಗಿದೆ.
ಇದರ ಮೌಲ್ಯ ರೂ 6,000 ರೂ ಮತ್ತು ಸಾಗಾಟಕ್ಕೆ ಬಳಸಿದ ವಾಹನದ ಮೌಲ್ಯ ರೂ 2 ಲಕ್ಷ ಎಂದು ಅಂದಾಜಿಸಲಾಗಿದೆ. ಹೆಡ್ ಕಾನ್ಸ್ಟೇಬಲ್ ಕೃಷ್ಣ ಅವರ ದೂರಿನಂತೆ ನದಿಯಿಂದ ಮರಳನ್ನು ಕಳವು ಮಾಡಿ ಸರ್ಕಾರದ ರಾಜಸ್ವಕ್ಕೆ ನಷ್ಟ ಉಂಟು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಬಂಧಿತ ಧನಕೀರ್ತಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮರಳು ಮತ್ತು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.