ಕನ್ನಡವು ಭಾಷೆಯ ಹೊರತಾಗಿ ಜೀವನದ ಆಧಾರವಾಗಬೇಕು: ನಿತೇಶ್ ಬಲ್ಲಾಳ್

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ತು, ಮೂಡಬಿದಿರೆ  ತಾಲೂಕು ಘಟಕ ಹಾಗೂ ಎಸ್‌.ಎನ್‌.ಎಮ್ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಕನ್ನಡ ಕಂಪು ಕಾರ್ಯಕ್ರಮದ ಅಂಗವಾಗಿ ‘ಕನ್ನಡ ಭಾಷಾ ಪ್ರೇಮ ಮತ್ತು ಯುವ ಜನತೆ’ ಎಂಬ  ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಎಸ್‌.ಎನ್‌.ಎಮ್ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೂಡುಬಿದಿರೆ ಜೈನ್ ಪ್ರೌಢಶಾಲೆಯ ಶಿಕ್ಷಕ ನಿತೇಶ್ ಬಲ್ಲಾಳ್ ಮಾತನಾಡಿ ಓದಿನ ಮೂಲಕ, ಕೇಳುವಿಕೆಯ ಮೂಲಕ ಹಾಗೆ ಕಲಿಯುವಿಕೆಯ ಮೂಲಕ ಕನ್ನಡ ನಮ್ಮ ನರನಾಡಿಗಳಲ್ಲಿ ಮೇಳೈಯಿಸಬೇಕು. ಕನ್ನಡ,  ಭಾಷೆಯ ಹೊರತಾಗಿ ಜೀವನದ ಆಧಾರವಾಗಬೇಕು. ಕನ್ನಡ ಪುಸ್ತಕಗಳು, ಪತ್ರಿಕೆಗಳು, ಲೇಖನಗಳು, ಕಾದಂಬರಿಗಳು ಹಾಗೂ ಕವಿತೆಗಳನ್ನು ಓದುವ ಮೂಲಕ ಭಾಷೆಯೊಂದಿಗೆ ಬಾಂಧವ್ಯ ಗಟ್ಟಿಯಾಗುತ್ತದೆ. ಬರವಣಿಗೆಯ ಮೂಲಕ ನಮ್ಮ ಆಲೋಚನೆಗಳನ್ನು ಕನ್ನಡದಲ್ಲಿ ಅಭಿವ್ಯಕ್ತಿಸಿದಾಗ, ಭಾಷೆಯ ಸೃಜನಶೀಲತೆ ಮತ್ತು ಸಾಮರ್ಥ್ಯ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಭಾಷೆಯ ಉಳಿವು ಬಳಕೆಯಲ್ಲಿದೆ. ಕನ್ನಡದಲ್ಲಿ ಮಾತನಾಡುವುದು, ಬರೆಯುವುದು ಹೆಮ್ಮೆಯ ವಿಚಾರವೆನಿಸಿಕೊಳ್ಳಬೇಕು ಎಂದರು.  

ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡ ಭಾಷೆಯ ಮೇಲಿನ ಪ್ರೀತಿ  ಕೆಲವೇ ಸಂಧರ್ಭಗಳಿಗೆ ಸೀಮಿತವಾಗಬಾರದು. ಬದಲಾಗಿ ದಿನನಿತ್ಯದ ಜೀವನದಲ್ಲಿ ಕನ್ನಡದ ಬಳಕೆ ಹೆಚ್ಚಿಸಿ, ಕನ್ನಡ ಪುಸ್ತಕಗಳನ್ನು ಓದಿ, ಕನ್ನಡಿಗರ ಸಾಧನೆಗಳನ್ನು ಪ್ರಚಾರ ಮಾಡಿ ಹಾಗೂ ಕನ್ನಡವನ್ನು ಹೆಮ್ಮೆಯಿಂದ ಬಳಸುವುದೇ ನಿಜವಾದ ಪ್ರೀತಿಯಾಗಿದೆ.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸದಾನಂದ ನಾರಾವಿ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ರಾಜೇಶ್ವರಿ ಕೆ.ಎನ್., ಎನ್‌.ಎಸ್‌.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರಾಮ್ ಪ್ರಸಾದ್ ಎಮ್ ಮತ್ತು ಗೋಪಾಲಕೃಷ್ಣ ಕೆ.ಎಸ್., ಎನ್‌.ಎಸ್‌.ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು, ವಿಭಾಗ ಮುಖ್ಯಸ್ಥರು, ಉಪನ್ಯಾಸಕ ವೃಂದದವರು ಇದ್ದರು.

ಚಿತ್ರಶ್ರೀ ಹಾಗೂ ಮನ್ವಿತ ಕನ್ನಡ ವಿಚಾರವಾಗಿ ಮಾತುಗಳನ್ನಾಡಿದರೆ, ಸುದರ್ಶನ್ ಹಾಡಿನೊಂದಿಗೆ ಎಲ್ಲರನ್ನ ರಂಜಿಸಿದರು. ಎನ್‌.ಎಸ್‌.ಎಸ್‌.ನ ಘಟಕ ನಾಯಕರುಗಳು ಕನ್ನಡದ ಕುರಿತಾದ ಹಾಡಿಗೆ ಹೆಜ್ಜೆ ಹಾಕಿದರು. ಪೂರ್ಣಿಮಾ ಸ್ವಾಗತಿಸಿ, ಶಿಬಾನಿ ಕಾರ್ಯಕ್ರಮ ನಿರೂಪಿಸಿದರು. ವಿನೋದ್ ವಂದಿಸಿದರು.

LEAVE A REPLY

Please enter your comment!
Please enter your name here