ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ (ಸ್ವಾಯತ) ನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು, ಉಜಿರೆ ಎಸ್. ಡಿ. ಎಮ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆ. 22ರಂದು ಸಸ್ಯಶಾಸ್ತ್ರ ಲ್ಯಾಬ್ ನಲ್ಲಿ ನಡೆಸಲಾಯಿತು.
ಉಜಿರೆ ಸಂಧ್ಯಾ ಟ್ರೇಡರ್ಸ್ ನ ಮಾಲೀಕ ಮತ್ತು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ ಶಿಬಿರವನ್ನು ಉದ್ಘಾಟಿಸಿ ಮಾತಾಡಿ, ರಕ್ತದಾನ ನಮ್ಮ ಆರೋಗ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಒಬ್ಬ ವ್ಯಕ್ತಿಯ ರಕ್ತದಾನದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳುತ್ತವೆ ಹಾಗಾಗಿ ರಕ್ತದಾನ ಶ್ರೇಷ್ಠದಾನ ಎಂದರು.
ಅಭಿವೃದ್ಧಿಯ ಹೊಂದುವ ಹಾದಿಯಲ್ಲಿರುವ ನಮ್ಮ ದೇಶದಲ್ಲಿ ಪ್ರತಿಯೊಂದು ಯಾಂತ್ರಿಕವಾಗಿದೆ ಎಲ್ಲವನ್ನು ಯಂತ್ರಗಳು ತಯಾರಿಸಿ ಕೊಡುತ್ತದೆ ಆದರೆ ರಕ್ತವನ್ನು ಉತ್ಪದಿಸುವುದಕ್ಕೆ ಇಲ್ಲಿಯ ತನಕ ಯಾವುದೇ ಯಂತ್ರಗಳಿಲ್ಲ ಎಂದು ಅಭಿಪ್ರಾಯಪಟ್ಟರು.

ರಕ್ತದ ಮಹತ್ವ ಅಪಘಾತವಾದಗ ಮಾತ್ರ ನಮಗೆ ತಿಳಿಯುತ್ತದೆ. ಇಂದು ನಾವು ರಕ್ತದಾನದ ಮೂಲಕ ಮಾಡಿದ ಒಂದು ಸಹಾಯ ಮುಂದೊಂದು ದಿನ ನಮ್ಮ ಅವಶ್ಯಕತೆಯ ಸಮಯದಲ್ಲಿ ನಮ್ಮನ್ನೇ ಅರಸಿ ಬರುತ್ತದೆ ಎಂದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ವಿದ್ಯಾಕ್ಷೇತ್ರದಲ್ಲಿ ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ವಿಶ್ವ ದಾಖಲೆಯನ್ನು ಬರೆದಿರುವುದು ಸಂತಸದ ಸಂಗತಿ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್. ಡಿ. ಎಮ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ್ ಮಾತನಾಡಿ, ರಕ್ತ ಎಂಬುದು ಎಲ್ಲರಿಗೂ ಒಂದೇ ಇಲ್ಲಿ ಜಾತಿ, ವರ್ಣ, ಲಿಂಗದ ಭೇದವಿರುವುದಿಲ್ಲ ಹಾಗಾಗಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಮೂಡಿಸುತ್ತದೆ.
ಡಾ . ಡಿ ವೀರೇಂದ್ರ ಹೆಗ್ಗಡೆ ಅವರು ಎಸ್.ಡಿ.ಎಮ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆಯನ್ನು ಸಾವಿರಕ್ಕೂ ಹೆಚ್ಚು ಜನ ರೋಗಿಗಳಿಗೆ ನೀಡಿ ಅವರುಗಳ ಬದುಕನ್ನು ಬೆಳಕಾಗಿಸಿದ ಸಮಯದ ನೆನಪುಗಳನ್ನ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ ಪಿ. ಮಾತಾಡಿ, ರಕ್ತದಾನ ಮಾಡುವುದರ ಬಗೆಗೆ ವಿದ್ಯಾರ್ಥಿಗಳು ಕೈಗೊಂಡಿರುವ ನಿರ್ಧಾರ ಉತ್ತಮವಾಗಿದೆ.
ರಕ್ತದಾನ ಮಾಡುವ ಮೂಲಕ ಸಮಾಜದ ಇತರ ಜನರಿಗೆ ನೀವುಗಳು ಮಾದರಿಯಾಗಬೇಕು ಎಂದರು.
ಶಿಕ್ಷಣದ ಜೊತೆಗೆ ರಕ್ತದಾನದ ರೀತಿಯ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷ ರೊಟೇರಿಯನ್ ಪ್ರಕಾಶ್ ಪ್ರಭು. ಮಂಗಳೂರು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಇದರ ಶಿಬಿರ ಸಂಯೋಜಕ ಪ್ರವೀಣ್, ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಯೋಗಾಲಯ ಅಧೀಕ್ಷಕ ಶಿತಿಕಂಠ ಭಟ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಜನಾಧಿಕಾರಿ ಮಾಲಿನಿ ಅಂಚನ್, ಸ್ವಯಂಸೇವಕರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 225 ಯುನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ರಕ್ಷಾ ಆರ್. ದೇವಾಡಿಗ ನಿರೂಪಿಸಿದರು. ಸ್ವಯಂ ಸೇವಕಿ ನಂದಿನಿ ವಂದಿಸಿದರು.