ಬೆಳ್ತಂಗಡಿಯ ಹೆಮ್ಮೆ: ಡಾ. ರಂಜಿತ್ ಕುಮಾರ್ ಆರ್. ಜಪಾನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ಹುದ್ದೆಗೆ ಆಯ್ಕೆ

0

ಬೆಳ್ತಂಗಡಿ: ಲಾಯಿಲ – ಬೆಳ್ತಂಗಡಿಗೆ ಇದು ಹೆಮ್ಮೆಪಡುವಂತಹ ಸುದ್ದಿ ಡಾ. ರಂಜಿತ್ ಕುಮಾರ್ ಆರ್. ಅವರು ಜಾಗತಿಕ ಅಕಾಡೆಮಿಕ್ ವೇದಿಕೆಯಲ್ಲಿ ಅಪರೂಪದ ಹಾಗೂ ಗೌರವಾನ್ವಿತ ಅವಕಾಶವನ್ನು ಗಳಿಸಿದ್ದಾರೆ. ಜಪಾನ್‌ನ ಖ್ಯಾತ JSPS (Japan Society for the Promotion of Science) ಪೋಸ್ಟ್ ಡಾಕ್ಟೊರಲ್ ಫೆಲೋಶಿಪನ್ನು ಅವರು ಗಳಿಸಿದ್ದು, ಮುಂದಿನ 2 ವರ್ಷಗಳ ಕಾಲ ಜಪಾನ್‌ನ ಹೊಕ್ಕೈಡೊ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಅವರು ತಮ್ಮ ಸಂಶೋಧನೆಯನ್ನು ಮುಂದುವರಿಸಲಿದ್ದಾರೆ.

JSPS ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್, ವಿದೇಶಗಳಿಂದ ಬಂದ ಆರಂಭಿಕ ಹಂತದ ಸಂಶೋಧಕರಿಗೆ ಜಪಾನಿನಲ್ಲಿ ಸಹಯೋಗಿ ಸಂಶೋಧನೆ ನಡೆಸಲು ಬೆಂಬಲ ನೀಡುವ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಇದು ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ವಿಶ್ವದ ನಾನಾ ಕ್ಷೇತ್ರಗಳಿಂದ ಅನೇಕ ಅರ್ಜಿಗಳು ಬರುತ್ತವೆ, ಆದರೆ ಪ್ರತಿ ವರ್ಷ ಕೇವಲ ಸೀಮಿತ ಸಂಖ್ಯೆಯ ಫೆಲೋಶಿಪ್‌ಗಳನ್ನು ಮಾತ್ರ ನೀಡಲಾಗುತ್ತದೆ. ಈ ಫೆಲೋಶಿಪ್‌ನ್ನು ಪಡೆಯಲು ದೃಢವಾದ ಸಂಶೋಧನಾ ಪರಿಣಿತಿ, ಚೆನ್ನಾಗಿ ಸಿದ್ಧಪಡಿಸಿದ ಸಂಶೋಧನಾ ಪ್ರಸ್ತಾವನೆ, ಮತ್ತು ಜಪಾನಿ ವಿಜ್ಞಾನಿಯೊಂದಿಗೆ ಸಂಶೋಧನಾ ಸಹಯೋಗದ ಅಗತ್ಯವಿರುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ಜಗತ್ತಿನಾದ್ಯಂತ ಕೇವಲ 41 ಮಂದಿ ಸಂಶೋಧಕರಿಗೆ ಮಾತ್ರ ಈ ಗೌರವ ದೊರೆತಿದ್ದು, ಭಾರತದಿಂದ ಕೇವಲ 6 ಮಂದಿ ಮಾತ್ರ ಇದರಲ್ಲಿ ಸ್ಥಾನ ಪಡೆದಿದ್ದಾರೆ. ಈ ಅಪೂರ್ವ ಗೌರವವು ಡಾ. ರಂಜಿತ್ ಅವರ ಭೌತಶಾಸ್ತ್ರ ಕ್ಷೇತ್ರದ ಮೇರು ಪ್ರತಿಭೆಯನ್ನು ಮಾತ್ರವಲ್ಲದೆ, ಅವರ ಬದ್ಧತೆ, ಪರಿಶ್ರಮ ಹಾಗೂ ವಿಜ್ಞಾನ ಸಂಶೋಧನೆಗೆ ಇರುವ ಅಚಲ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಲಾಯಿಲ, ಬೆಳ್ತಂಗಡಿಯಲ್ಲಿ ದಿವಂಗತ ರವಿಚಂದ್ರ ಮತ್ತು ಮಲ್ಲಿಕಾ ಆರ್ ದಂಪತಿಯ ಎರಡನೇ ಪುತ್ರನಾಗ ಜನಿಸಿದ ಡಾ. ರಂಜಿತ್ ಅವರು, ಸದ್ಯ IIT ಬಾಂಬೆ ನಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಂತ ಥೆರೆಸಾ ಪ್ರೌಢ ಶಾಲೆ, ವಾಣಿ ಪದವಿ ಪೂರ್ವ ಕಾಲೇಜು ಹಾಗು SDM ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದು ಬೆಂಗಳೂರಿನ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್) ನಲ್ಲಿ Ph.D. ಪದವಿಯನ್ನು ಪಡೆದಿದ್ದಾರೆ. ಅವರ ಸಾಧನೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಆಸಕ್ತ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ, ಪರಿಶ್ರಮ ಹಾಗೂ ಏಕಾಗ್ರತೆಯಿಂದ ಸಾಧ್ಯವೆಂಬುದಕ್ಕೆ ಸ್ಪೂರ್ತಿದಾಯಕ ಮಾದರಿಯಾಗಿದೆ.

ಈ ಮೈಲಿಗಲ್ಲನ್ನು ಆಚರಿಸುತ್ತಿರುವ ಕುಟುಂಬದವರು ಹಾಗೂ ಸ್ಥಳೀಯರು ಅಪಾರ ಸಂತೋಷ ವ್ಯಕ್ತಪಡಿಸಿದ್ದು “ಅವರ ಸಾಧನೆ ಕೇವಲ ವೈಯಕ್ತಿಕ ಹೆಮ್ಮೆ ಮಾತ್ರವಲ್ಲ, ಬೆಳ್ತಂಗಡಿ ಮತ್ತು ಭಾರತದ ಗೌರವವೂ ಹೌದು” ಎಂದು ಹೇಳಿದರು.

ಜಪಾನ್‌ನಲ್ಲಿ ತಮ್ಮ ವೃತ್ತಿಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವ ಡಾ. ರಂಜಿತ್ ಅವರಿಗೆ, ಅವರ ಊರಿನವರು, ಸಹೋದ್ಯೋಗಿಗಳು ಹಾಗೂ ದೇಶದಾದ್ಯಂತ ತಮ್ಮ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. ಅವರ ಪಯಣವು ಶಿಕ್ಷಣ, ಉತ್ಸಾಹ ಮತ್ತು ಹಠದ ಶಕ್ತಿಗೆ ಸಾಕ್ಷಿಯಾಗಿ, ಇನ್ನೂ ಅನೇಕರು ಉನ್ನತ ಗುರಿ ಇಟ್ಟು ದೊಡ್ಡ ಕನಸು ಕಾಣಲು ಪ್ರೇರಣೆ ನೀಡುತ್ತದೆ.ಎಂದು ಸುದ್ದಿ ನ್ಯೂಸ್ ತಂಡ ಅವರಿಗೆ ಶುಭ ಹಾರೈಸುತ್ತದೆ.

LEAVE A REPLY

Please enter your comment!
Please enter your name here