ನಾರಾವಿ: ಮಕ್ಕಳ ಸುರಕ್ಷತೆ, ಗೌರವ ಮತ್ತು ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಭಾರತ ಸರಕಾರವು 2012ರಲ್ಲಿ ಜಾರಿಗೊಳಿಸಿದ್ದ ಮಹತ್ವದ ಕಾನೂನು ’ಪೋಕ್ಸೋ ಕಾಯ್ದೆ’ ಹಾಗೂ ಆರೋಗ್ಯಕರ ಮತ್ತು ಸಕಾರಾತ್ಮಕ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವ ಉದ್ದೇಶಕ್ಕಾಗಿ ’ವ್ಯಸನ ಮುಕ್ತ ಕಾಲೇಜು’ ಎಂಬ ವಿಷಯಗಳ ಬಗ್ಗೆ ಸಂತ ಅಂತೋನಿ ಕಾಲೇಜಿನಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ವಿದ್ಯಾರ್ಥಿಗಳಿಗೆ ಸದ್ಭಾವನೆ ಪ್ರತಿಜ್ಞೆಯನ್ನು ಬೋಧಿಸಿದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ. ಅವರು ಪೋಕ್ಸೋ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು. ’ವ್ಯಸನ ಮುಕ್ತ ಕಾಲೇಜು’ ಎಂಬ ವಿಚಾರದ ಬಗ್ಗೆ ಮಾತನಾಡಿದ ಬೆಂಗಳೂರಿನ ವಕೀಲೆ ರಶ್ಮಿತಾ ಎನ್. ಅವರು ’ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಲು ವಿದ್ಯಾರ್ಥಿಗಳು ಪಣತೊಡಬೇಕು ಎಂದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಚೇತ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ರಿಸಾನಾ ಕಾರ್ಯಕ್ರಮವನ್ನು ನಿರೂಪಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿನಿ ತಮೀಮಾ ಎಲ್ಲರಿಗೂ ಧನ್ಯವಾದವಿತ್ತರು.