ಮಡಂತ್ಯಾರು: ವಿಜ್ಞಾನಿಯೇ ಆಗಲಿ, ಉದ್ಯಮಿಯೇ ಆಗಲಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿಗಾಗಿ ಸಾಹಿತ್ಯ ಬೇಕೆ ಬೇಕು. ಪ್ರಾದೇಶಿಕ ಭಾಷೆಯಾಗಿ ಕನ್ನಡ ಸಾಹಿತ್ಯವು ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪಡೆದ ಭಾಷೆಯಾಗಿದೆ. ವಿದ್ಯಾರ್ಥಿಗಳು ಸಾಹಿತ್ಯದ ಓದಿನ ಕಡೆಗೆ ಗಮನ ಕೊಡಬೇಕು.ಸಾಹಿತ್ಯ ರಸಾನುಭವವನ್ನು ನೀಡುತ್ತದೆ ಎಂದು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಯದುಪತಿ ಗೌಡ ಹೇಳಿದರು. ಅವರು ಆ.30ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಹಾಗೂ ಮಡಂತ್ಯರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಜರುಗಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಉಪನ್ಯಾಸಮಾಲೆ ಪ್ರಯುಕ್ತ ಡಾ. ಬಿಆರ್ ಅನಂತಮೂರ್ತಿಯವರ ಕುರಿತು ನಡೆದ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಡಾ. ಯುಆರ್ ಅನಂತಮೂರ್ತಿ ಸಾಹಿತ್ಯ ಹಾಗೂ ಜೀವನ ದರ್ಶನದ ಕುರಿತು ಉಪನ್ಯಾಸ ನೀಡಿದರು.
“ಅನಂತಮೂರ್ತಿಯವರು ಸಮಾಜವಾದಿ, ಸಜ್ಜನ, ಸರಳ ರಾಜಕಾರಣಿಯಾಗಿ ಈ ಕರುನಾಡು ಕಂಡ ವಿಶಿಷ್ಟ ಸಾಹಿತಿಗಳಲ್ಲಿ ಒಬ್ಬರು. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸಾಹಿತ್ಯವನ್ನು ಓದದೆ ಕೇವಲ ಒಂದು ಹೇಳಿಕೆಯನ್ನು ಮಾತ್ರವೇ ಓದಿದವರಿಗೆ ಅನಂತಮೂರ್ತಿಯವರ ವ್ಯಕ್ತಿತ್ವವನ್ನು ಅರ್ಥೈಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನೆಸ್ ಸ್ವಾಗತಿಸಿದರು. ಉಪನ್ಯಾಸಕ ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಹೋಬಳಿ ಘಟಕದ ಅಧ್ಯಕ್ಷ ಡಿ.ದಿವಾಕರ.ಕೆ ವಂದಿಸಿದರು.