ಧಾರ್ಮಿಕ ವಿರೋಧಿ ಶಕ್ತಿಗಳು ಯಾವುವೆಂದು ಶೀಘ್ರವಾಗಿ ತನಿಖೆ ಮಾಡಿ ಪತ್ತೆಹಚ್ಚಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು: ಪ್ರತಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ ಅಧ್ಯಕ್ಷ ಡಾ.ಸಂಪತ್ ಕುಮಾರ್ ಆಗ್ರಹ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ಸೃಷ್ಟಿಸಿರುವ ಮುಖವಾಡದ ಹಿಂದೆ ಇರುವ ಧಾರ್ಮಿಕ ವಿರೋಧಿ ಶಕ್ತಿಗಳ ಬಗ್ಗೆ ಸಿಬಿಐ ಅಥವಾ ಎನ್.ಐ.ಎ ಯಿಂದ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಮಾಡಲೀದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್‌ ಅಧ್ಯಕ್ಷ ಡಾ. ಸಂಪತ್ ಕುಮಾರ್ ಹಾಗೂ ರಾಜ್ಯ ಅಧ್ಯಕ್ಷ ವೆಂಕಟೇಶ್‌ ಹೇಳಿದರು. ಅವರು ಆ.21ರಂದು ಧರ್ಮಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳವು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗು ಸಂಪ್ರದಾಯಗಳನ್ನು ರೂಡಿಸಿಕೊಂಡು ಬಂದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳವು ಸುಮಾರು 840 ವರ್ಷಗಳ ಇತಿಹಾಸವನ್ನು ಹೊಂದಿದ್ದು ಕೋಟ್ಯಾಂತರ ಭಕ್ತಾದಿಗಳ ಶ್ರದ್ದೆ ಮತ್ತು ಭಕ್ತಿಯಿಂದ ಭಕ್ತಾದಿಗಳ ಮನೋಇಷ್ಮಾರ್ಥಗಳನ್ನು ಈಡೇರಿಸುತ್ತಿದ್ದು ಇಂತಹ ಕ್ಷೇತ್ರವು ಕೇವಲ ಶ್ರದ್ಧೆ, ಭಕ್ತಿ, ಭಾವನೆಗಳ ಕೇಂದ್ರವಾಗಿರದೇ ಅನೇಕ ವರ್ಷಗಳಿಂದ ತನ್ನ ಸೇವೆಯನ್ನು ಶಿಕ್ಷಣ ಕ್ಷೇತ್ರ, ಅಧ್ಯಾತ್ಮಿಕ ಚಟುವಟಿಕೆಗಳು, ಆರೋಗ್ಯ, ಅನ್ನದಾಸೋಹ ದಂತಹ ಸತ್ಕಾರ್ಯಗಳ ಜೊತೆಗೆ ಇಡೀ ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಸಮಾಜದ ಬೇಕು ಬೇಡಗಳನ್ನು ಅರಿತು ಇಡೀ ಜಗತ್ತಿನಲ್ಲಿ ಎಲ್ಲೂ ಕಾಣದ ರೀತಿಯಲ್ಲಿ ಸಮುದಾಯದ ಬೇಡಿಕೆಗೆ ಅನುಗುಣವಾಗಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳಾದ ವಿಧವಾವೇತನ, ವಿದ್ಯಾರ್ಥಿವೇತನ, ಸೂರಿಲ್ಲದ ನಿರ್ಗತಿಕರಿಗೆ ವಾತ್ಸಲ್ಯ ಯೋಜನೆ, ಸ್ವಾಸ್ಥ ಸಂಕಲ್ಪ, ಅನಾರೋಗ್ಯ ಪೀಡಿತರಿಗೆ ಸಹಾಯ ಧನ ವಿತರಣೆ, ಕೃಷಿಕರಿಗೆ ಸಹಾಯಕ ಕಾರ್ಯ, ನಮ್ಮೂರು ನಮ್ಮಕೆರೆ” ಪರಿಸರ ಸಂರಕ್ಷಣೆ ಮಧ್ಯವರ್ಜನಾ ಶಿಬಿರ ಹಾಗೂ ಇವೆಲ್ಲಕ್ಕಿಂತ ಮುಖ್ಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಎಸ್.ಕೆ.ಡಿ.ಆರ್.ಡಿ.ಪಿ (ಬಿ ಸಿ ಟ್ರಸ್ಟ್) ನ ಮೂಲಕ ಲಕ್ಷಾಂತರ ಮಂದಿ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಶಕ್ತಿಯನ್ನು ನೀಡುವುದರ ಮೂಲಕ ಸೇವಾ ಕಾರ್ಯಗಳು ಹೀಗೆ ಒಂದೇ ಎರಡೇ ಎಂಬುವಂತೆ ವಿಶಿಷ್ಟ ಸೇವಾ ಚಟುವಟಿಕೆಗಳ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದು ಇವಲ್ಲ ಸತ್ಕಾರ್ಯಗಳಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರೇರಕ ಶಕ್ತಿಯಾಗಿ ನಿಂತು ಆ ಮಂಜುನಾಥನ ಕೃಪೆಯಿಂದ ಸುಗಮವಾಗಿ ನಡೆಯುತ್ತಿರುವುದು ಕೋಟ್ಯಾಂತರ ಭಕ್ತಾದಿಗಳ ಸುದೈವವೇ ಸರಿ.

ಶ್ರೀ ಕ್ಷೇತ್ರದ ಎಲ್ಲಾ ಸೇವೆಗಳು ಧರ್ಮಾತೀತ ಎಂಬುದು ಇಡೀ ಸಮಾಜಕ್ಕೆ ಇದರ ಅರಿವಿದೆ ಇವೆಲ್ಲದರ ನಡುವೆ ಕಳೆದ ಕೆಲವು ದಿನಗಳಿಂದ ಕ್ಷೇತ್ರದ ಸತ್ಕಾರ್ಯಗಳನ್ನು ಸಹಿಸದ ಸಮಾಜದ ಧಾರ್ಮಿಕ ವಿರೋಧಿಗಳು ಭಾರತದ ಹಲವಾರು ಧಾರ್ಮಿಕ ಕ್ಷೇತ್ರಗಳ ಮೇಲೆ ತಮ್ಮ ಸ್ವಾರ್ಥಕ್ಕಾಗಿ ಮತ್ತು ಧರ್ಮದ ವಿರೋಧಕ್ಕಾಗಿ ಧಾರ್ಮಿಕ ಕ್ಷೇತ್ರಗಳ ಬಲವನ್ನು ಕುಗ್ಗಿಸುವ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅದೇ ರೀತಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮಹಿಮೆಯನ್ನು ಮತ್ತು ಸಮಾಜ ಸೇವೆಯನ್ನು ಸಹಿಸದ ಕೆಲವು ದುಷ್ಕರ್ಮಿಗಳು ಈ ರೀತಿಯಾಗಿ ಅಪಪ್ರಚಾರವನ್ನು ಮಾಡಿ ಸಮಾಜದ ಬಹುಸಂಖ್ಯಾತ ಭಕ್ತರ ಮನೋಭಾವನೆಗಳಿಗೆ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆಯನ್ನು ಉಂಟುಮಾಡಿ ನೋವುಂಟು ಮಾಡುವ ಹುನ್ನಾರವನ್ನು ಹೂಡಿ ಸಮಾಜದಲ್ಲಿ ಅಪಪ್ರಚಾರವನ್ನು ಮಾಡುತ್ತಿದ್ದಾರೆ.

ಕರ್ನಾಟಕ ಸರ್ಕಾರವು ಯಾರೋ ಒಬ್ಬ ಅನಾಮಿಕ ದೂರು ನೀಡಿದ ತಕ್ಷಣ ಸ್ಪಂದಿಸಿ SIT ರಚನೆ ಮಾಡಿ ಶ್ರೀಕ್ಷೇತ್ರಕ್ಕೆ ಕಳುಹಿಸಿ ಪರಿಶೀಲನೆ ಮಾಡಿರುವುದು ಸರಿಯಷ್ಟೇ ಆದರೆ ಇದುವರೆವಿಗೂ ಆಪಾದಿಸಿರುವ ಯಾವುದೇರೀತಿಯ ಪುರಾವೆಗಳಾಗಲಿ ಸಾಕ್ಷಿಗಳಾಗಲಿ ದೊರಕಿರುವುದಿಲ್ಲ ಎಂಬುದು ಇಡೀ ಜಗತ್ತಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಈ ರೀತಿ ಅನುಮಾನಸ್ಪದವಾಗಿ ಶ್ರೀ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿ ಕ್ಷೇತ್ರಕ್ಕೆ ಅಗೌರವವನ್ನು ಉಂಟುಮಾಡಿರುವುದರಿಂದ ಧಾರ್ಮಿಕ ಹಕ್ಕುಗಳಿಗೆ ಮತ್ತು ಮಾನವ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ ಎಂದು ಭಾವಿಸುತ್ತೇವೆ. ಆದ್ದರಿಂದ ಈ ರೀತಿಯಾಗಿ ಅಪಪ್ರಚಾರವನ್ನು ಸೃಷ್ಟಿಸಿರುವ ಮುಖವಾಡದ ಹಿಂದೆ ಇರುವ ಧಾರ್ಮಿಕ ವಿರೋಧಿ ಶಕ್ತಿಗಳು ಯಾವುವೆಂದು ಶೀಘ್ರವಾಗಿ ತನಿಖೆ ಮಾಡಿ ಪತ್ತೆಹಚ್ಚಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ಕಠಿಣಶಿಕ್ಷೆಗೆ ಗುರಿಪಡಿಸಬೇಕೆಂದು ಶ್ರೀ ಕ್ಷೇತ್ರದ ಕೋಟ್ಯಾಂತರ ಭಕ್ತರ ಪರವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ ಒತ್ತಾಯ ಮಾಡುತ್ತದೆ ಎಂದು ತಿಳಿಸಿದರು.

ಆದ್ದರಿಂದ ಘನತವೆತ್ತ ರಾಜ್ಯಪಾಲರು ಈ ತಕ್ಷಣ ಕರ್ನಾಟಕ ರಾಜ್ಯ ಸರ್ಕಾರದ ಗಮನಕ್ಕೆ ಮತ್ತು ಕೇಂದ್ರ ಸರ್ಕಾರದ ಗಮನಕ್ಕೂ ವಿಷಯವನ್ನು ತಲುಪಿಸಿ ಶೀಘ್ರವಾಗಿ ಶ್ರೀ ಕ್ಷೇತ್ರದ ಗೌರವವನ್ನು ಉಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ ನ ಚೀಫ್ ಸೆಕ್ರೆಟರಿ ರವಿಕುಮಾರ್ ಎಮ್., ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಯಾದವ್, ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಗೌಡ, ಪೆರುಮಾಳ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರ ಗೌಡ ಪಾಟೀಲ್‌, ಬಳ್ಳಾರಿ ಜಿಲ್ಲಾ ಅಧ್ಯಕ್ಷೆ ಪುಷ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here