ಬಂಟರ ಯಾನೆ ನಾಡವರ ಸಂಘ ಉಜಿರೆ ವಲಯದ “ಆಟಿಡೊಂಜಿ ದಿನ” ಮಕ್ಕಳಿಗೆ ಧಾರ್ಮಿಕ ಆಚರಣೆಯ ಸಂಸ್ಕಾರ ತಿಳಿಸಿ ಮುನ್ನಡೆಸಿ: ವಿಶ್ವನಾಥ ಶೆಟ್ಟಿ

0

ಉಜಿರೆ: ಬಂಟ ಸಮಾಜ ಒಟ್ಟಾಗುವ ಉದ್ದೇಶವೇ ಆಟಿಡೊಂಜಿ ದಿನ ಆಚರಣೆ. ನಮ್ಮ ದಿನನಿತ್ಯದ ಧಾರ್ಮಿಕ ಆಚರಣೆಯ ಸಂಸ್ಕಾರ, ಆಟಿ ಆಚರಣೆಯ ಮಹತ್ವ ಮಕ್ಕಳಿಗೆ ತಿಳಿಸಿ, ಸಂಸ್ಕಾರ ನೀಡಿ ಮುನ್ನಡೆಸಬೇಕು ಎಂದು ಧರ್ಮಸ್ಥಳ ಎಸ್‌.ಕೆ.ಡಿ.ಆರ್‌.ಡಿ.ಪಿ ನಿವೃತ್ತ ನಿರ್ದೇಶಕ ವಿಶ್ವನಾಥ ಶೆಟ್ಟಿ ಸುಲ್ಕೇರಿ ನುಡಿದರು.

ಅವರು ಆ.10ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಬಂಟರ ಯಾನೆ ನಾಡವರ ಸಂಘ ಉಜಿರೆ ವಲಯದ ಆಶ್ರಯದಲ್ಲಿ ನಡೆದ “ಆಟಿಡೊಂಜಿ ದಿನ ಮತ್ತು ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಉದ್ಘಾಟಿಸಿ ಶುಭ ಕೋರಿದರು. ವಲಯದ ಅಧ್ಯಕ್ಷೆ ವನಿತಾ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತಾಲೂಕು ಬಂಟರ ಸಂಘದ ನಿರ್ದೇಶಕ, ಉಜಿರೆ ವಲಯದ ಸಂಚಾಲಕ ಸಂಜೀವ ಶೆಟ್ಟಿ ಕುಂಟಿನಿ, ತಾಲೂಕು ಬಂಟರ ಸಂಘದ ಮಹಿಳಾ ವಿಭಾಗ ಅಧ್ಯಕ್ಷೆ ಜಯಲಕ್ಷ್ಮಿ ಎನ್ ಸಾಮಾನಿ ಕರಂಬಾರು ಬೀಡು ಮತ್ತು ತಾಲೂಕು ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು.

ಕಳೆದ ಎಸ್‌.ಎಸ್‌.ಎಲ್‌.ಸಿ ಅಂತಿಮ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜದ ಸಮೀಕ್ಷಾ, ಅನುಷ್ಕಾ ಶೆಟ್ಟಿ ಹಾಗೂ ರೇಶ್ಮಾ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುಣ್ಯ, ದಿವ್ಯಶ್ರೀ ಕೆ. ಮತ್ತು ಸಾಕ್ಷಿ ಎಸ್. ಶೆಟ್ಟಿ ಅವರನ್ನು ಗಣ್ಯ ಅತಿಥಿಗಳು ಪುರಸ್ಕರಿಸಿ ಗೌರವಿಸಿದರು.

ಬಂಟರ ಸಂಘ ಉಜಿರೆ ವಲಯದ ಸಂಚಾಲಕ ಸಂಜೀವ ಶೆಟ್ಟಿ ಕುಂಟಿನಿ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ನಿರೂಪಿಸಿದ ಕಾರ್ಯಕ್ರಮದಲ್ಲಿ ವಲಯ ಕಾರ್ಯದರ್ಶಿ ಸುದೇಶ್ ಶೆಟ್ಟಿ ಕುಂಟಿನಿ ವಂದಿಸಿದರು.

LEAVE A REPLY

Please enter your comment!
Please enter your name here