
ಪದ್ಮುಂಜ: ಕರ್ನಾಟಕ ಮುಸ್ಲಿಂ ಜಮಾಅತ್ ಕೆ.ಎಂ.ಜೆ. ಸುನ್ನೀ ಯುವ ಜನ ಸಂಘ ಉರುವಾಲು ಸರ್ಕಲ್ ವತಿಯಿಂದ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೌಹಾರ್ದ ಸಂಗಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪದ್ಮುಂಜ ರಿಕ್ಷಾ ತಂಗುದಾಣದಲ್ಲಿ ಎಸ್.ವೈ.ಎಸ್ ಸರ್ಕಲ್ ಅಧ್ಯಕ್ಷ ರಫೀಕ್ ಝೈನಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸ್ವಾಲಿಹ್ ಪದ್ಮುಂಜ ಅವರು ಸೌಹಾರ್ದ ಹಾಡಿನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಡಿವಿಷನ್ ಅಧ್ಯಕ್ಷ ಅತಾವುಲ್ಲ ಹಿಮಮಿ ಸಖಾಫಿ ಅವರು ಮಾತನಾಡಿ ಜಾತಿ ಮತ ಧರ್ಮ ಬೇಧವಿಲ್ಲದೆ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಪೂರ್ವಿಕರು ನೂರಾರು ವರ್ಷಗಳ ಹೋರಾಟ ನಡೆಸಿದ ಪ್ರಯತ್ನದ ಫಲವಾಗಿ ನಮ್ಮ ದೇಶಕ್ಕೆ 1947 ಅಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿದೆ. ಅದೆಲ್ಲವನ್ನೂ ಮರೆತು ಇಂದು ನಾವು ಜಾತಿ ಜಾತಿಗಳ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಚ್ಛಾಟ ಮಾಡುತ್ತಿರುವುದು ದೇಶದ ದೊಡ್ಡ ದುರಂತವೇ ಸರಿ. ಎಲ್ಲಾ ಮತ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಸೌಹಾರ್ದ ಸಂಗಮ ನಡೆಸಿ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವುದು ಎಂದರೆ ಇದೊಂದು ಶ್ಲಾಘನೀಯ ಕಾರ್ಯ ಎಂದರು.
ಪದ್ಮುಂಜದಲ್ಲಿ 37 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ಎಂ. ವೆಂಕಟರಮಣ ಭಟ್ ಹಾಗೂ ಅಪಘಾತ ರಹಿತವಾಗಿ 36 ವರ್ಷಗಳಿಂದ ಚಾಲಕ ವೃತ್ತಿ ನಡೆಸುತ್ತಿರುವ ಹಸೈನಾರ್ (ಚಾಬ) ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಂ. ವೆಂಕಟರಮಣ ಭಟ್ ಅವರು 37 ವರ್ಷಗಳ ತನ್ನ ಅನುಭವದ ಮಾತುಗಳನ್ನಾಡಿದರು.
ಮುಖ್ಯ ಅತಿಥಿ ಪದ್ಮುಂಜ ಪ್ರೌಢ ಶಾಲಾ ಅಧ್ಯಾಪಕ ಉಮೇಶ್ ಗೌಡ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸತೀಶ್ ರಾವ್ ಮಲೆಂಗಲ್ಲು,
ಪ್ರದೀಪ್ ಶೆಟ್ಟಿ ಮಲೆಂಗಲ್ಲು, ರಿಕ್ಷಾ ಮಾಲಕರಾದ ರಮೇಶ್ ಪದ್ಮುಂಜ, ರಮೇಶ್ ಕಣಿಯೂರು, ಅಬೂಬಕ್ಕರ್ ಹಾಜಿ, ಇಲ್ಯಾಸ್ ಕರಾಯ, ಕ.ಎಂ.ಜೆ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್, ಪದ್ಮುಂಜ ಮಸೀದಿಯ ಗುರುಗಳಾದ ಹುಸೈನ್ ಸುಲ್ತಾನಿ ಸಅದಿ, ಅಧ್ಯಾಪಕ ಮುಹಮ್ಮದ್ ಸಫ್ವಾನ್ ಹಿಕಮಿ, ಕೆ.ಎಂ.ಜೆ ಕೋಶಾಧಿಕಾರಿ ಕಾಸಿಂ ಪೀರ್ಯ, ಕೆ.ಎಂ.ಜೆ ಮುರ ಯೂನಿಟ್ ಅಧ್ಯಕ್ಷ ಇಬ್ರಾಹಿಂ ಎನ್.ಎನ್.ಬಿ. ಇಬ್ರಾಹಿಂ ಮದನಿ ಪೀರ್ಯ, ಪದ್ಮುಂಜ ಮಸೀದಿ ಅಧ್ಯಕ್ಷ ರಫೀಕ್ ಅಂತರ, ರಝಾಕ್ ಸಅದಿ ಉಪಸ್ಥಿತರಿದ್ದರು.
ಕೆ.ಎಂ.ಜೆ ಉರುವಾಲುಪದವು ಸರ್ಕಲ್ ಅಧ್ಯಕ್ಷ ಕಾಸಿಂ ಪದ್ಮುಂಜ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಎಫ್ ಡಿವಿಷನ್ ಕಾರ್ಯದರ್ಶಿ ನಿಜಾಮುದ್ದೀನ್ ಧನ್ಯವಾದ ಸಲ್ಲಿಸಿದರು.