
ಪಟ್ಟೂರು: ಸಂಸ್ಕಾರಯುತ ಭಾರತದ ನಿರ್ಮಾಣದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು, ದೇಶವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸನಾತನಿ ಆಗಬೇಕು ಎಂದು ಕೊಕ್ಕಡದ ಪಂಚಮಿ ಹಿತಾಯುರ್ಧಾಮದ ವೈದ್ಯೆ ಡಾ. ತಾರಾ ಗಣೇಶ್ ನುಡಿದರು.
ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪರಂಪರೆಯ ಮೌಲ್ಯಗಳನ್ನು ಒಳಗೊಂಡ ಈ ಪ್ರವೇಶೋತ್ಸವದಲ್ಲಿ, ಹೊಸ ವಿದ್ಯಾರ್ಥಿಗಳ ಮನದಲ್ಲಿ ಶಾಲೆಯೊಂದಿಗೆ ಹಾಗೂ ಭಾರತೀಯ ಸಂಸ್ಕೃತಿಯೊಂದಿಗೆ ಅಳಿಯದ ಬಾಂಧವ್ಯವನ್ನು ಬೆಳೆಸುವ ಸಂದೇಶ ಮೂಡಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪ್ರಗತಿಪರ ಕೃಷಿಕ ಹಾಗೂ ನೆಲ್ಯಾಡಿಯ ಕ್ಷಿತಿ ಆಗ್ರೋ ಎಂಟರ್ ಪ್ರೈಸಸ್ ನ ಮಾಲಕ ಸಮಂತ್ ಜೈನ್ ದೀಪ ಪ್ರಜ್ವಲನೆ ಮಾಡಿ ಅಗ್ನಿಕುಂಡಕ್ಕೆ ಅಗ್ನಿ ಸ್ಪರ್ಶ ಮಾಡಿ, ಘೃತಾಹುತಿ ಸಮರ್ಪಿಸುವ ಮೂಲಕ ಪ್ರವೇಶೋತ್ಸವಕ್ಕೆ ಚಾಲನೆ ನೀಡಿದರು.

ಸಭಾಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜನಾರ್ಧನ ಕಜೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಕೋಶಾಧಿಕಾರಿ ಗಣೇಶ್ ಕೆ., ಪಟ್ಟೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯ ದೇವಚಂದ್ರ ಮೊಟ್ಟಿಕಲ್ಲು, ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಉಪಸ್ಥಿತರಿದ್ದರು.
ಶಾಲೆಗೆ ದಾಖಲಾದ ನೂತನ ವಿದ್ಯಾರ್ಥಿಗಳಿಗೆ, ಶಿಕ್ಷಕಿಯರು ಆರತಿ ಬೆಳಗಿ, ಅಕ್ಷತೆ ಹಾಕಿ, ಸಿಹಿ ನೀಡಿ ಬರಮಾಡಿಕೊಂಡರು. ನೂತನ ವಿದ್ಯಾರ್ಥಿಗಳು ಘೃತಾಹುತಿ ಸಲ್ಲಿಸಿ, ವೇದಿಕೆಯಲ್ಲಿದ್ದ ಗಣ್ಯರಿಂದ ತಿಲಕ ಧಾರಣೆ ಮಾಡಿಸಿಕೊಂಡು ಹಿರಿಯರ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗನ್ಯಶ್ರೀ ಸ್ವಾಗತಿಸಿ, ನವ್ಯ ನಿರೂಪಿಸಿದರು. ಸಾಂದ್ರಾ ಎ. ಎಸ್. ವಂದಿಸಿದರು.