
ಬೆಳ್ತಂಗಡಿ: ಎಕ್ಸಲೆಂಟ್ ಸ್ವಾತಂತ್ರೋತ್ಸವ ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್. ಮುಂದುಮನಿ ಧ್ವಜಾರೋಹಣ ಮಾಡುವುದರೊಂದಿಗೆ ಆಚರಿಸಲಾಯಿತು. ಬಳಿಕ ಮಾತನಾಡಿದ ಅವರು ಬದುಕಿನಲ್ಲಿ ಅನಿರೀಕ್ಷಿತಗಳು ಸಂಭವಿಸಿದಾಗ ಅದನ್ನು ಎದುರಿಸಿ ಈ ದೇಶದ ಘನತೆ ಗೌರವ ಕಾಪಾಡುವಲ್ಲಿ ನಾವು ಕಟಿಬದ್ಧರಾಗಬೇಕು ಎಂದರು. ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ನೂತನ ಲಾಂಛನವನ್ನು ತಹಶೀಲ್ದಾರ್ ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಪ್ರತಿಕೂಲತೆಗಳ ನಡುವೆ ದೃಢ ಚಿತ್ತದಿಂದ ಬದುಕಿ ಗೆದ್ದು ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಅಭಯಚಂದ್ರ ಜೈನ್ ದೇಶ ಭಾಷೆಗಳ ರಕ್ಷಣೆ ನಮ್ಮ ಕರ್ತವ್ಯ ಎಂದರು. ಎನ್‌ಸಿಸಿ ವಿದ್ಯಾರ್ಥಿಗಳು ಕವಾಯತಿನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ವೇದಿಕೆಯಲ್ಲಿ ಎಕ್ಸಲೆಂಟ್ ಮೂಡುಬಿದಿರೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕಿ ಪ್ರಿಯಾಂಕ ಸ್ವಾಗತಿಸಿ, ಡಾ. ಶೃತಿ ಅತಿಥಿಗಳನ್ನು ಪರಿಚಯಿಸಿದರು. ಉಪಮುಖ್ಯೋಪಾಧ್ಯಾಯ ಜಯಶೀಲ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ಪಿಂಟೋ ವಂದಿಸಿದರು.