
ಉಜಿರೆ: ಮಂಜುಶ್ರೀ ಮುದ್ರಣಾಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಪಡೆದ ಮಂಜುಶ್ರೀ ಪ್ರಿಂಟರ್ಸ್‌ನ ಸಿಬ್ಬಂದಿಗಳಾದ ಮೋನಪ್ಪ ಟಿ. ಮತ್ತು ಗಂಗಾಧರ ಶೆಟ್ಟಿಯವರ ಬೀಳ್ಕೊಡುಗೆ ಸಮಾರಂಭ ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಅವರು ಮೋನಪ್ಪ ಟಿ. ಮತ್ತು ಗಂಗಾಧರ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು. ಬಳಿಕ ಮಾತನಾಡಿ, ಇಬ್ಬರೂ ಸಂಸ್ಥೆಗೆ ಸಲ್ಲಿಸಿದ ಸೇವೆಯನ್ನು ಪ್ರಶಂಸಿಸಿದರು.
ಸಹೋದ್ಯೋಗಿ ಚಂದ್ರಶೇಖರ್ ಯು. ನಿವೃತ್ತರ ಕಾರ್ಯವೈಖರಿ ಕುರಿತು ಅನುಭವ ಹಂಚಿಕೊಂಡರು. ನಿವೃತ್ತರ ಕುಟುಂಬ, ಮುದ್ರಣಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಂಜುಶ್ರೀ ಮುದ್ರಣಾಲಯದ ವ್ಯವಸ್ಥಾಪಕ ಶೇಖರ್ ಟಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರವಿ ಪರಕ್ಕಜೆ ನಿರೂಪಿಸಿದರು. ಸಹಾಯಕ ವ್ಯವಸ್ಥಾಪಕರಾದ ವೆಂಕಪ್ಪ ವಂದಿಸಿದರು.