
ಬೆಳ್ತಂಗಡಿ : ಸುದ್ದಿ ಸಮೂಹ ಸಂಸ್ಥೆಯ ವತಿಯಿಂದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹಾಗೂ ಬೆನಕ ಹೆಲ್ತ್ ಸೆಂಟರ್ ಉಜಿರೆಯ ಪ್ರಾಯೋಜಕತ್ವದಲ್ಲಿ ಹೋಟೆಲ್ ಶ್ರೀ ದುರ್ಗಾ ಗ್ರ್ಯಾಂಡ್ ನ ಸಹಪ್ರಾಯೋಜಕತ್ವದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಹಕಾರದೊಂದಿಗೆ ಮುದ್ದು ಕೃಷ್ಣ ಸ್ಪರ್ಧೆ 2025 ಸಮಾರೋಪ ಸಮಾರಂಭವು ಸುದ್ದಿ ಬಿಡುಗಡೆ ಬೆಳ್ತಂಗಡಿ ವಾರಪತ್ರಿಕೆಯ ಸಿಇಒ ಸಿಂಚನಾ ಉರುಬೈಲು ಅವರ ಅಧ್ಯಕ್ಷತೆಯಲ್ಲಿ ಆ.10ರಂದು ಗುರುನಾರಾಯಣ ಸಂಘದ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಜಿರೆ ಬೆನಕ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲಕೃಷ್ಣ, ಡಾ.ಭಾರತಿ ಉಪಸ್ಥಿತರಿದ್ದರು.

ಉಜಿರೆಯ ಬೆನಕ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಗೋಪಾಲಕೃಷ್ಣ ಅವರು ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಪ್ರತಿಯೊಂದು ವಿಷಯದಲ್ಲಿ ವಿನೂತನ ಹಾಗೂ ನಿಷ್ಪಕ್ಷ ವರದಿಯನ್ನು ಮಾಡುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆಯು ಪ್ರಸಿದ್ಧಿ ಪಡೆದಿದ್ದು ತಾಲೂಕಿನ ಮೂಲೆ ಮೂಲೆಯ ಮನೆಗಳಿಗೆ ಹರಡಿರುವುದು ಹೆಮ್ಮೆಯ ಸಂಗತಿ. ಸುದ್ದಿಯ ಸಮೂಹ ಸಂಸ್ಥೆಯಿಂದ ಪುಟಾಣಿ ಮಕ್ಕಳಿಗೆ ಏರ್ಪಡಿಸಲಾಗಿರುವ ಈ ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದು ಮುಖ್ಯ ಅಲ್ಲ, ಭಾಗವಹಿಸುವುದು ಮುಖ್ಯ. ವೇದಿಕೆಯ ಚಟುವಟಿಕೆಗಳಲ್ಲಿ ಮಕ್ಕಳನ್ನು ಸದಾ ತೊಡಗಿಸಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಬೆನ್ನೆಲುಬುಗಳಾಗಿ ನಿಲ್ಲಬೇಕು. ಭಾಗವಹಿಸಿದ ಪುಟಾಣಿ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

6 ತಿಂಗಳಿನಿಂದ 3 ವರ್ಷದ ವರೆಗಿನ ಹಾಗೂ 3ವರ್ಷದಿಂದ 6 ವರ್ಷದವರೆಗಿನ ಎರಡು ವಿಭಾಗದಲ್ಲಿ ಮುದ್ದು ಮಕ್ಕಳ ಕೃಷ್ಣ ವೇಷ ಸ್ಪರ್ಧೆ ನಡೆಸಲಾಗಿದ್ದು, 50ಕ್ಕೂ ಹೆಚ್ಚು ಪುಟಾಣಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪೋಷಕರು ಪುಟಾಣಿ ಕಂದಮ್ಮಗಳಿಗೆ ಕೃಷ್ಣ ವೇಷ ಹಾಕಿಸಿ ಸ್ಪರ್ಧೆಯಲ್ಲಿ ಬಹಳ ಉತ್ಸುಕತೆಯಿಂದ ಪಾಲ್ಗೊಂಡರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸುದ್ದಿ ಬಿಡುಗಡೆಯ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ಸ್ವಾಗತಿಸಿ, ಧನ್ಯವಾದವಿತ್ತರು.
ಚಾನೆಲ್ ನ ನಿರೂಪಕಿ ಶ್ರೇಯಾ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.