
ಉಜಿರೆ: ವಿದ್ಯಾರ್ಥಿಗಳು ವಿದ್ಯೆ, ಉದ್ಯೋಗ ನೀಡಿದ ಶಿಕ್ಷಣ ಸಂಸ್ಥೆಗೆ, ಹೆತ್ತವರಿಗೆ ಸದಾ ವಿಧೇಯರಾಗಿರಬೇಕು. ವಿದ್ಯಾವಂತರೆಂಬ ಅಹಂಕಾರ ಸಲ್ಲದು ಎಂದು ಕಿಲ್ಲೂರಿನ ಹಿರಿಯ ವೈದ್ಯೆ ಡಾ. ವಾಣಿ ಸುಗುಣ ಕುಮಾರ್ ಹೇಳಿದರು.
ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಆ.4ರಂದು ಅವರು ನೂತನ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಇಲ್ಲ ಎಂಬ ಹಿಂಜರಿಕೆ ಇರಬಾರದು. ಕಲಿಕೆಗೆ ಬೇಕಾದ ವ್ಯವಸ್ಥೆಯನ್ನು ಹೆತ್ತವರು ಮಾಡಬೇಕು. ಹಾಗೆಂದು ವಿದ್ಯೆ ಕಲಿತ ಕೂಡಲೇ ಜೀವನದ ಅನುಭವ ಬರುವುದಿಲ್ಲ. ಜೀವನಾನುಭವ ಬರಬೇಕಾದರೆ ಉದ್ಯೋಗಕ್ಕೆ ಸೇರಬೇಕು. ಅಹಂಕಾರ ಬಿಟ್ಟು ಜೀವನಾನುಭವ ಗಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
“ಉದ್ಯೋಗ ಕಲ್ಪಿಸುವ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಮಹತ್ವ, ಬೇಡಿಕೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಈ ಕಾಲೇಜು ವಿದ್ಯಾರ್ಥಿಗಳಿಗೆ ಆಶಾದಾಯಕವಾಗಿದೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. “ಸ್ವಂತ ಸಂಪಾದನೆಯ ಮೇಲೆ ಬನ್ನಿ, ತಂದೆ ತಾಯಿಗೆ ಹೊರೆಯಾಗಬೇಡಿ. ಛಲದಿಂದ ಓದಿ. ಸಾಧನೆಗೆ ವಯಸ್ಸು ಮುಖ್ಯವಲ್ಲ” ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿ, ಮಾಲಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರಮೇಶ್ ನಾಯ್ಕ ಅವರು ಮಾತನಾಡಿ, ಐ.ಟಿ.ಐ. ಶಿಕ್ಷಣ ಕುರಿತು, ವಿವಿಧ ಉದ್ಯೋಗ ಅವಕಾಶಗಳು, ಅಪ್ರಂಟಿಶಿಪ್ ಹಾಗೂ ಉನ್ನತ ಶಿಕ್ಷಣ ಮಾಡಲು ಇರುವ ಅವಕಾಶ ಕುರಿತು ತಿಳಿಸಿದರು. ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನಿಂದ ಐ.ಟಿ.ಐ.ಗೆ ಇರುವ ಮಾನ್ಯತೆ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶೈಕ್ಷಣಿಕ ಸಂಯೋಜಕ ಎಸ್.ಎನ್. ಕಾಕತ್ಕರ್ ಅವರು, ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತಿರುವುದರಿಂದ ಎಲ್ಲಾ ಸೀಟುಗಳು ಭರ್ತಿಯಾಗುತ್ತಿವೆ. ಪ್ರಾಧ್ಯಾಪಕರ ಶ್ರಮ ಮತ್ತು ಉತ್ತಮ ಬೋಧನೆಯಿಂದ ಕಾಲೇಜಿಗೆ ಹೆಸರು ಬರುತ್ತಿದೆ. ಆದಷ್ಟು ಶಿಸ್ತುಬದ್ಧ ಜೀವನ, ಸಮಯಪಾಲನೆ ಹೊಂದಿದಾಗ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಲ್ಲಾ ವಿದ್ಯಾರ್ಥಿನಿಯರು ಭಾರತಮಾತೆಗೆ ದೀಪ ಬೆಳಗಿಸುವ ಮೂಲಕ ಗೌರವ ಸಮರ್ಪಿಸಿದರು. ಸಂಸ್ಥೆಯ ಪ್ರಾಚಾರ್ಯ ವಿ. ಪ್ರಕಾಶ್ ಕಾಮತ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ಕ್ಷಮಾ ಕುಲಾಲ್ ವಂದಿಸಿದರು.