ಬೋಳಿಯಾರ್-ಮುಳಿಕ್ಕಾರ್‌ನಲ್ಲಿ ಕಾಡಾನೆ ದಾಳಿ: ಅಪಾಯದಿಂದ ಪಾರಾದ ಮಕ್ಕಳು

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೋಳಿಯಾರ್ ಮತ್ತು ಮುಳಿಕ್ಕಾರ್‌ನಲ್ಲಿ ಕಾಡಾನೆ ದಾಳಿ ಮಾಡಿದ ಘಟನೆ ಜು.೨೮ರಂದು ಬೆಳಿಗ್ಗೆ ನಡೆದಿದೆ. ಬೋಳಿಯಾರ್ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಕಾಯುತ್ತಿದ್ದಾಗ ವೇಳೆ ಬಸ್ ನಿಲ್ದಾಣದ ಕಡೆಗೆ ಕಾಡಾನೆ ನುಗ್ಗಿ ಬಂದಿದೆ. ಮಕ್ಕಳು ಅಲ್ಲಿಂದ ಓಡಿ ಅಂಗಡಿ ಒಳಗೆ ಸೇರಿದ್ದರಿಂದ ಮಕ್ಕಳು ಪಾರಾಗಿದ್ದಾರೆ. ಕಾಡಾನೆಯ ಓಡಾಟದ ಚಿತ್ರಣ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಧರ್ಮಸ್ಥಳ ಗ್ರಾಮದ ಬೋಳಿಯಾರು ಮತ್ತು ಮುಳಿಕ್ಕರ್‌ನಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದರಿಂದ ಕೃಷಿಕರು ಆತಂಕದಲ್ಲಿದ್ದಾರೆ. ಇಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಗಳು ಓಡಾಟ ನಡೆಸುತ್ತಿದ್ದು ಹಲವರ ತೋಟಗಳಿಗೆ ಆನೆ ನುಗ್ಗಿ ಹಾನಿ ಉಂಟು ಮಾಡಿದೆ. ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಗೊಳಿಸಿದೆ.

ಕೊಕ್ಕಡದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆಯ ಬಳಿಕ ಆನೆಯನ್ನು ಕಂಡ ತಕ್ಷಣ ಜನರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಧರ್ಮಸ್ಥಳ-ಪೆರಿಯಶಾಂತಿ ರಸ್ತೆಯ ಬದಿಯಲ್ಲಿಯೇ ಈ ಆನೆಗಳು ಓಡಾಟ ನಡೆಸುತ್ತಿದೆ. ಸೋಮವಾರ ಬೆಳಗ್ಗೆ ಒಂಟಿ ಸಲಗವೊಂದು ಬೋಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಅರಣ್ಯದತ್ತ ಸಾಗಿದೆ. ಈ ವೇಳೆ ವಾಹನಗಳು ಇಲ್ಲದಿದ್ದುದರಿಂದ ಅಪಾಯ ಸಂಭವಿಸಿಲ್ಲ. ಕಾಡಾನೆಗಳು ನಿರಂತರ ಕೃಷಿಹಾನಿ ಮಾಡುತ್ತಿದ್ದರೂ ಅವುಗಳನ್ನು ಓಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ಕೃಷಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿಶಿಲದಲ್ಲಿಯೂ ಕಾಡಾನೆ: ಶಿಶಿಲ ಗ್ರಾಮದ ಕಂಚಿನಡ್ಕದಲ್ಲಿ ಸುಬ್ಬ ಗೌಡ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದ ಘಟನೆ ಜು.೨೫ರಂದು ನಡೆದಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ., ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಮತ್ತು ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here