ಫೈರಿಂಗ್ ಪ್ರಕರಣ: ನಕ್ಸಲ್ ರೂಪೇಶ್ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯ-ಮರಳಿ ತ್ರಿಶೂರ್ ಜೈಲಿಗೆ

0

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಬೊಳ್ಳೆಯಲ್ಲಿ ೨೦೧೨ರ ಡಿಸೆಂಬರ್ ೧೦ರಂದು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಕೇರಳ ರಾಜ್ಯದ ತ್ರಿಶೂರ್‌ನ ಪೆರಿಂಗೊಟ್ಟುಕರ ನಿವಾಸಿ ರೂಪೇಶ್ ಪಿ.ಆರ್. (೫೮ವ) ಎಂಬವರನ್ನು ಕಸ್ಟಡಿಗೆ ಪಡೆದುಕೊಂಡಿದ್ದ ಡಿವೈಎಸ್‌ಪಿ ವಿಜಯಪ್ರಸಾದ್ ನೇತೃತ್ವದ ಬೆಳ್ತಂಗಡಿ ಠಾಣಾ ಪೊಲೀಸರು ವಿಚಾರಣೆ ಮುಕ್ತಾಯಗೊಳಿಸಿ ವಾಪಸ್ ತ್ರಿಶೂರ್ ಜೈಲಿಗೆ ಕಳುಹಿಸಿದ್ದಾರೆ.

ಮರಳಿ ತ್ರಿಶೂರ್ ಜೈಲಿಗೆ: ಮಿತ್ತಬಾಗಿಲು ಗ್ರಾಮದ ಬೊಳ್ಳೆಯಲ್ಲಿ ೨೦೧೨ರ ಡಿಸೆಂಬರ್ ೧೦ರಂದು ನಡೆದಿದ್ದ ಪೊಲೀಸರ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಕೇರಳದ ತ್ರಿಶೂರ್ ಜೈಲಿನಿಂದ ಬಾಡಿ ವಾರಂಟ್ ಮೂಲಕ ತ್ರಿಶೂರ್‌ನ ಪೆರಿಂಗೊಟ್ಟುಕರ ನಿವಾಸಿ ರೂಪೇಶ್ ಪಿ.ಆರ್. ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಡಿವೈಎಸ್‌ಪಿ ವಿಜಯಪ್ರಸಾದ್ ನೇತೃತ್ವದ ಪೊಲೀಸರು ಜು.೨೨ರಂದು ಬೆಳ್ತಂಗಡಿ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸಂದೇಶ್ ಕೆ. ಅವರ ಎದುರು ಹಾಜರು ಪಡಿಸಿದ್ದರು. ಈ ವೇಳೆ ಹೆಚ್ಚಿನ ತನಿಖೆಗಾಗಿ ರೂಪೇಶ್ ಪಿ.ಆರ್.ಅವರನ್ನು ಮೂರು ದಿನ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ತನಿಖಾಧಿಕಾರಿ ವಿಜಯಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದರು. ರೂಪೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಅಂದು ನಡೆದ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದ್ದರು. ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿದ್ದರು. ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರೂಪೇಶ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬೇರೆ ಪ್ರಕರಣಕ್ಕೆ ಸಂಬಂಧಿಸಿ ತ್ರಿಶೂರ್ ಜೈಲಿನಲ್ಲಿರುವ ರೂಪೇಶ್ ಅವರನ್ನು ಡಿವೈಎಸ್‌ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಮತ್ತೆ ತ್ರಿಶೂರ್ ಜೈಲಿಗೆ ಕಳುಹಿಸಲಾಗಿದೆ.

ಘಟನೆಯ ಹಿನ್ನೆಲೆ: ಮಿತ್ತಬಾಗಿಲು ಗ್ರಾಮದ ಬೊಳ್ಳೆಯಲ್ಲಿ ೨೦೧೨ರ ಡಿಸೆಂಬರ್ ೧೦ರಂದು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬಿನಿದಳದ ಮುಖ್ಯಸ್ಥೆ ಸಾವಿತ್ರಿಯವರನ್ನು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿವಾರಂಟ್ ಮೂಲಕ ಎ.೭ರಂದು ವಶಕ್ಕೆ ಪಡೆದಿದ್ದ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ವಿಜಯಪ್ರಸಾದ್ ನೇತೃತ್ವದ ಪೊಲೀಸರು ಬೆಳ್ತಂಗಡಿಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ನ್ಯಾಯಾಧೀಶ ಸಂದೇಶ್ ಕೆ. ಅವರು ಹೆಚ್ಚಿನ ತನಿಖೆಗಾಗಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಿ.ಸಿ. ೬೨/೨೦೧೨ರಂತೆ ದಾಖಲಾಗಿರುವ ಕುಪ್ಪುಸ್ವಾಮಿ ವರ್ಸಸ್ ಸ್ಟೇಟ್ ಆಫ್ ವಕಿಂಗ್ ಕರ್ನಾಟಕ ಕೇಸ್‌ನಲ್ಲಿ ೩ರ/ಡಬ್ಲ್ಯು ಇಂಡಿಯನ್ ಆರ್ಮ್ಸ್ ಆಕ್ಟ್ ೧೪೩, ೧೪೭, ೧೪೮, ೧೨೧,(ಬಿ), ೩೦೭, ೩೩೩, ೧೪೯, ೧೬(೧), ಬಿ, ೧೮ ಎ, ೨೦ರಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯ ವೇಳೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರು ಈ ಘಟನೆ ನಡೆದಾಗ ನಮ್ಮ ಸಹವರ್ತಿ ರೂಪೇಶ್ ಪಿ.ಆರ್. ನಮ್ಮೊಂದಿಗೆ ಇದ್ದರು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರೂಪೇಶ್‌ರವರನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ತನಿಖೆಗಾಗಿ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.

ಮಿತ್ತಬಾಗಿಲು ಗ್ರಾಮದ ಬೊಳ್ಳೆ ಎಂಬ ಪ್ರದೇಶದಲ್ಲಿ ಗುಂಪುಗೂಡಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಬಂದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದಾಗ ನಕ್ಸಲರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲು ನಿವಾಸಿ ವಿಕ್ರಂ ಗೌಡ ಮತ್ತು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ ಅಲ್ಲಿಂದ ಪರಾರಿಯಾಗಿದ್ದರು. ಈ ವೇಳೆ ಪೊಲೀಸರು ಮತ್ತು ಅಲ್ಲಿ ಉಳಿದಿದ್ದ ನಕ್ಸಲ್ ತಂಡದ ನಡುವೆ ನಡೆದ ದಾಳಿ ಪ್ರತಿ ದಾಳಿ ವೇಳೆ ಪೊಲೀಸ್ ಇಲಾಖೆಯ ಸದಾಶಿವ ಚೌಧರಿ ಅವರಿಗೆ ಗುಂಡೇಟು ತಗುಲಿತ್ತು. ಈ ಪ್ರಕರಣದಲ್ಲಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೇಸ್‌ನಲ್ಲಿ ಸಾವಿತ್ರಿ ಮೂರನೇ ಆರೋಪಿಯಾಗಿದ್ದು ಬಿ.ಜಿ. ಕೃಷ್ಣಮೂರ್ತಿ ಐದನೇ ಆರೋಪಿಯಾಗಿದ್ದಾನೆ. ಒಂದನೇ ಆರೋಪಿ ಕುಪ್ಪು ಸ್ವಾಮಿ ಮೃತಪಟ್ಟಿದ್ದು ವಿಕ್ರಂ ಗೌಡ ಪೊಲೀಸರ ಎನ್‌ಕೌಂಟರ್‌ಗೆ ಇತ್ತೀಚೆಗೆ ಬಲಿಯಾಗಿದ್ದಾನೆ. ಸುಂದರಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಮ್ಮುಖದಲ್ಲಿ ಶರಣಾಗಿದ್ದು ಬೆಂಗಳೂರು ಜೈಲಿನಲ್ಲಿದ್ದಾಳೆ.

LEAVE A REPLY

Please enter your comment!
Please enter your name here