ದ ಯೆನೆಪೋಯ ಕಾಲೇಜಿನಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ

0

ಬೆಳ್ತಂಗಡಿ: ಮೂಡುಬಿದ್ರೆ ತೋಡಾರು, ದ ಯೆನೆಪೋಯ ಕಾಲೇಜಿನಲ್ಲಿ 2025-26ನೇ ಸಾಲಿನ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಜು. 28ರಂದು ಹಮ್ಮಿಕೊಳ್ಳಲಾಯಿತು. ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಭಾಕರ ಬಿ.ಕೆ. ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು.

ಪದವಿಯೊಂದಿಗೆ ಕೌಶಲ್ಯವರ್ಧನೆಯ ಅವಶ್ಯಕತೆಯ ಕುರಿತಂತೆ ಸೋದಾಹರಣವಾಗಿ ವಿವರಿಸುತ್ತಾ, ಅವರು ಮಾನವೀಯ ಸಂಬಂಧಗಳಿಗೆ ಪ್ರಾಶಸ್ತ್ಯ ನೀಡಿ ಜೀವನವನ್ನು ರೂಪಿಸಬೇಕಾದ ಅಗತ್ಯತೆಯನ್ನು ತಿಳಿಸಿದರು. ಬದುಕನ್ನು ಕೇವಲ ವ್ಯಾವಹಾರಿಕವಾಗಿ ನೋಡದೆ, ವಿದ್ಯಾರ್ಜನೆಯ ಜೊತೆಜೊತೆಗೆ ಸಾಮಾಜಿಕ ಹಿತಾಸಕ್ತಿಯಿಂದ ಬದುಕಬೇಕಾದ ವಿಚಾರಗಳನ್ನು ಮನಮುಟ್ಟುವಂತೆ ಪ್ರಸ್ತಾಪಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ, ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರೋಶನ್ ಮೆಲ್ವಿನ್ ಡಿಸೋಜಾ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರೊ. ಪಲ್ಲವಿ ನಿರೂಪಿಸಿ, ಪ್ರೊ. ಶಿವಪ್ರಸಾದ್ ಅತಿಥಿ ಪರಿಚಯವನ್ನು ಮಾಡಿದರು. ಪ್ರೊ. ಶಮಿತಾ ವಂದಿಸಿದರು.

LEAVE A REPLY

Please enter your comment!
Please enter your name here