ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಉಚಿತ ಹೃದ್ರೋಗ ಚಿಕಿತ್ಸೆಗೆ ಸುಸಜ್ಜಿತ ಕ್ಯಾಥ್ ಲ್ಯಾಬ್ ಕಾರ್ಯಾರಂಭಕ್ಕೆ ಸಿದ್ದ: ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆ

0

ಬೆಳ್ತಂಗಡಿ: ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಸುಸಜ್ಜಿತ ಕ್ಯಾಥ್‌ಲ್ಯಾಬ್ ಕಾರ್ಯಾರಂಭಕ್ಕೆ ಸಿದ್ದವಾಗಿದೆ. ವೆನ್ಲಾಕ್ ನಲ್ಲಿ ಇನ್ನು ಮುಂದೆ ಬಡ ರೋಗಿಗಳಿಗೆ ಹೃದ್ರೋಗ ಚಿಕಿತ್ಸೆ ಆಂಜಿಯೋಪ್ಲಾಸ್ಟಿ ಹಾಗೂ ಆಂಜಿಯೋಗ್ರಾಮ್ ಸಂಪೂರ್ಣ ಉಚಿತ ಎಂದು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆ ತಿಳಿಸಿದ್ದಾರೆ.

ದೇಶದಲ್ಲೆಡೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಚರ್ಚೆಯ ವಿಷಯವಾಗಿರುವಂತೆ, ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ದುಬಾರಿ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿದೆ. ಈ ನಡುವೆ, ದ.ಕ. ಜಿಲ್ಲಾಸ್ಪತ್ರೆ ವೆನ್ಲಾಕ್ ನಲ್ಲಿ ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆಗೆ ಪೂರಕವಾದ ಕ್ಯಾಥ್ (ಕಾರ್ಡಿಯಾಕ್ ಕ್ಯಾತಿಟರೈಸೇಶನ್) ಲ್ಯಾಬ್ ಸಿದ್ದಗೊಂಡಿದೆ.

ಶೀಘ್ರದಲ್ಲೇ ಕ್ಯಾಥ್‌ಲ್ಯಾಬ್ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಲಾಗಿದ್ದು, ಆಂಜಿಯೋಪ್ಲಾಸ್ಪಿ ಹಾಗೂ ಆ್ಯಂಜಿಯೋಗ್ರಾಮ್ ಮೊದಲಾದ ದುಬಾರಿ ವೆಚ್ಚದ ಹೃದಯ ಶಸ್ತ್ರಚಿಕಿತ್ಸೆಗಳು ಇಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಲಭಿಸಲಿದೆ.ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆಗಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಾನ್ಯ ದಿನೇಶ್ ಗುಂಡೂರಾವ್ ಅವರ ಮುತುವರ್ಜಿಯಲ್ಲಿ ವೆನ್ಲಾಕ್’ನಲ್ಲಿ ಕ್ಯಾಥ್ ಲ್ಯಾಬ್ ಆರಂಭಕ್ಕೆ ಪ್ರಕ್ರಿಯೆಗಳು ನಡೆದಿವೆ.

ಕೆಎಂಸಿ ಆಸ್ಪತ್ರೆಯ ನೆರವಿನಲ್ಲಿ ಕಾರ್ಯಾಚರಿಸುತ್ತಿರುವ ವೆನ್ನಾಕ್‌ನ ಹೊಸ ತುರ್ತು ಚಿಕಿತ್ಸಾ ವಿಭಾಗದ ಘಟಕದ ನೆಲ ಮಹಡಿಯಲ್ಲಿ ನೂತನ ಕ್ಯಾಥ್ಲ್ಯಾಬ್ ಸಿದ್ದಪಡಿಸಲಾಗಿದೆ. ಕೆಎಂಸಿ ಆಸ್ಪತ್ರೆಯಿಂದ ತಜ್ಞ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ನೇಮಕ ಈಗಾಗಲೇ ನಡೆದಿದ್ದು, ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಆಂಜಿಯೋಪ್ಲಾಸ್ಟಿ ಹಾಗೂ ಆ್ಯಂಜಿಯೋಗ್ರಾಮ್ ಮೊದಲಾದ ಹೃದಯ ಸಂಬಂಧಿ ಚಿಕಿತ್ಸೆಗಳ ಅಗತ್ಯವಾದ ಸಲಕರಣೆಗಳು, ಔಷಧವನ್ನು ವೆನ್ಹಾಕ್ ಆಸ್ಪತ್ರೆಯಿಂದ ಒದಗಿಸಲಾಗುತ್ತದೆ. ಈ ಮೂಲಕ ಇಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದ್ದು ಎಪಿಎಲ್ ಕಾರ್ಡುದಾರರಿಗೂ ಆಯುಷ್ಮಾನ್’ನಡಿ ಚಿಕಿತ್ಸೆ ಸೇರಿದಂತೆ ಅಗತ್ಯವಾದ ಕೆಲವೊಂದು ಪ್ರಕ್ರಿಯೆಗಳು ಸದ್ಯ ಚಾಲ್ತಿಯಲ್ಲಿದೆ. ಸುಮಾರು 5 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಈ ಕ್ಯಾಥ್ ಲಾಬ್ ಸಿದ್ದಗೊಂಡಿದೆ.

1848 ರಿಂದ ಅಸ್ಥಿತ್ವದಲ್ಲಿರುವ ಮಂಗಳೂರಿನ ಬಡರೋಗಿಗಳ ಆಶಾಕಿರಣವಾಗಿರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ಚಿಕಿತ್ಸೆಗಳು ಲಭ್ಯವಿವೆ. ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ಹೊರ ರಾಜ್ಯಗಳ ರೋಗಿಗಳು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಬರುತ್ತಾರೆ.

ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಇಲ್ಲಿ ದೊರೆಯುತ್ತವೆಯಾದರೂ, ಹೃದಾಯಾಘಾತ ವೇಳೆ ಆಂಜಿಯೋಪ್ಲಾಸ್ಟಿ ಹಾಗೂ ಆ್ಯಂಜಿಯೋಗ್ರಾಮ್ ಮೊದಲಾದ ಶಸ್ತ್ರ ಚಿಕಿತ್ಸೆಗಳಿಗಾಗಿ ಇತರ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿತ್ತು.

ಹೃದಯ ರೋಗ ತಜ್ಞರು, ನಾಲ್ಕು ಮಂದಿ ಟೆಕ್ನಿಶೀಯನ್ ಗಳು, 12 ಮಂದಿ ಸ್ಟಾಫ್ ನರ್ಸ್’ಗಳನ್ನು ಒದಗಿಸಲಾಗಿದೆ. ಉಳಿದಂತೆ ಔಷಧಿ ಹಾಗೂ ಶಸ್ತ್ರ ಚಿಕಿತ್ಸೆಯ ಸಂಬಂಧ ರೋಗಿಗೆ ಅಗತ್ಯವಾದ ವೈದ್ಯಕೀಯ ಸಲಕರಣೆಗಳನ್ನು ಆಸ್ಪತ್ರೆ ಕಡೆಯಿಂದ ಒದಗಿಸಲಾಗುತ್ತದೆ. ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ಇಲ್ಲಿ ಲಭ್ಯವಾಗಲಿದ್ದು ಆಗಸ್ಟ್.1ರಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾನ್ಯ ದಿನೇಶ್ ಗುಂಡೂರಾವ್ ಅದ್ಯಕ್ಷತೆಯಲ್ಲಿ ನಡೆಯಲಿರುವ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆಯಲ್ಲಿ ಕ್ಯಾಥ್ ಲ್ಯಾಬ್‌ನ ಕಾರ್ಯಾರಂಭ ಹಾಗೂ ಇತರ ವಿಷಯಗಳ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಶಿವಪ್ರಕಾಶ್ ಡಿ.ಎಸ್. ತಿಳಿಸಿರುತ್ತಾರೆಂದು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ನಾಮನಿರ್ದೇಶಿತ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆಯವರು ಸಾರ್ವಜನಿಕರಿಗೆ ಈ ಮಾಹಿತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here