
ಮುಂಡಾಜೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ಎಂಬಲ್ಲಿ ಬೃಹತ್ ಗಾತ್ರದ ಮರ ಜು.25ರಂದು ರಾತ್ರಿ 7.30ರ ಸುಮಾರಿಗೆ ರಸ್ತೆಗೆ ಉರುಳಿ ಬಿದ್ದು ಎರಡು ಗಂಟೆಗಿಂತ ಅಧಿಕಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ಮರ ಉರುಳುವ ವೇಳೆ ಸುಮಾರು ಹತ್ತರಷ್ಟು ವಿದ್ಯುತ್ ಕಂಬಗಳು ಮುರಿದು ಬಿದ್ದು ರಸ್ತೆಯುದ್ದಕ್ಕೂ ಹರಡಿಕೊಂಡಿದ್ದವು. ವಿದ್ಯುತ್ ಕಂಬವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು ಈ ವೇಳೆ ಗಾಯಗೊಂಡ ಚಿಕ್ಕಮಗಳೂರು ಮೂಲದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮುಂಡಾಜೆ ಗ್ರಾ.ಪಂ., ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣೆ ತಂಡ, ಮೆಸ್ಕಾಂ, ಅರಣ್ಯ ಇಲಾಖೆ, ಸ್ಥಳೀಯರು ಸೇರಿ ಮರ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಸಹಕರಿಸಿದರು.
ರಸ್ತೆಯ ಇಕ್ಕೆಲಗಳಲ್ಲೂ ತಲಾ ಎರಡು ಕಿಮೀ ಗೂ ಅಧಿಕ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜೋರಾಗಿ ಸುರಿಯುತ್ತಿದ್ದ ಮಳೆ, ಬೆಳಕಿನ ಅಭಾವ, ಅಗತ್ಯ ಸಲಕರಣೆ ಕೊರತೆ, ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ವಿದ್ಯುತ್ ಕಂಬ, ತಂತಿಗಳು ತ್ವರಿತ ಕಾರ್ಯಾಚರಣೆಗೆ ಅಡ್ಡಿ ನೀಡಿದವು.
ಕಕ್ಕಿಂಜೆ-ಮುಂಡಾಜೆ ಮೈನ್ ಲೈನ್ ಸಂಪರ್ಕದ ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ಮುಂಡಾಜೆ, ದಿಡುಪೆ ಫೀಡರ್ ನ ಎಲ್ಲಾ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಇದಕ್ಕೂ ಮೊದಲು ಸಂಜೆ 5 ಗಂಟೆ ವೇಳೆಗೆ ಇಲ್ಲಿಂದ 4 ಕಿಮೀ ದೂರದ ನಿಡಿಗಲ್ ಸಮೀಪ ರಸ್ತೆಗೆ ಮರ ಉರುಳಿ ಒಂದು ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.