
ಮುಂಡಾಜೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ- ಕಾಪು ರಕ್ಷಿತಾರಣ್ಯದ ನಿಡಿಗಲ್ -ಸೀಟು ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಉರುಳಿ ಬಿದ್ದ ಘಟನೆ ಜು. 25ರಂದು ಸಂಜೆ ನಡೆದಿದೆ. ಹಾಸನದ ಶಿವಕುಮಾರ್ ಎಂಬವರು ಚಾರ್ಮಾಡಿ ಕಡೆಯಿಂದ ಉಜಿರೆಯತ್ತ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು ಅದೃಷ್ಟವಶಾತ್ ಅಲ್ಪಸ್ವಲ್ಪ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಗೆ ಮರ ಅಡ್ಡಲಾಗಿ ಬಿದ್ದ ಪರಿಣಾಮ ಸುಮಾರು ಒಂದು ಗಂಟೆ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇಲ್ಲಿಂದ ಸುಮಾರು 50 ಮೀ ದೂರದಲ್ಲಿ ಜು. 24 ರಂದು ಮಧ್ಯಾಹ್ನ ಹೆದ್ದಾರಿ ರಸ್ತೆಗೆ ಮರ ಉರುಳಿ ಬಿದ್ದು ಸುಮಾರು ಒಂದು ತಾಸು ಹೊತ್ತು ಸಂಚಾರ ವ್ಯತ್ಯಯ ಉಂಟಾಗಿತ್ತು.
ನಿಡಿಗಲ್ ನಿಂದ ಸೋಮಂತಡ್ಕ ತನಕದ 3 ಕಿಮೀ ವ್ಯಾಪ್ತಿಯಲ್ಲಿ ಹಲವಾರು ಅಪಾಯಕಾರಿ ಮರಗಳಿದ್ದು ಇವುಗಳನ್ನು ತೆರೆವುಗೊಳಿಸಲು ಅನೇಕ ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇಲಾಖೆ ಈ ಬಗ್ಗೆ ಗಮನ ನೀಡದೆ ಅಪಾಯಗಳಿಗೆ ಆಹ್ವಾನ ನೀಡುತ್ತಾ ಸಂಚಾರ ವ್ಯತ್ಯಯಕ್ಕೂ ಕಾರಣವಾಗುತ್ತಿದೆ ಎಂದು ಮುಂಡಾಜೆ ಗ್ರಾ.ಪಂ. ಅಧ್ಯಕ್ಷ ಗಣೇಶ ಬಂಗೇರ ತಿಳಿಸಿದ್ದಾರೆ.