
ಬೆಳ್ತಂಗಡಿ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಮಾದಕ ದ್ರವ್ಯ ವಿರೋಧಿ ಘಟಕದ ವತಿಯಿಂದ “ಮಾದಕವಸ್ತು ವ್ಯಸನ ವಿರುದ್ಧ ಜಾಗೃತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡುಬಿದಿರೆಯ ಪೊಲೀಸ್ ಠಾಣೆಯ ಸಬ್ ಇನ್ ಪೆಕ್ಟರ್ ಕೆ.ಸಿ. ಪ್ರತಿಭಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾದಕ ವಸ್ತುಗಳ ವ್ಯಸನಕ್ಕೆ ಒಮ್ಮೆ ಒಳಗಾದರೆ ಅದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಾಶಮಾಡುತ್ತದೆ.

ಹದಿಹರೆಯದಲ್ಲಿ ಇಂತಹ ದುಶ್ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುವಂತೆ ನಿಮ್ಮನ್ನು ನೀವು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರ ವಹಿಸಬೇಕು ಅತಿಯಾದ ಜಾಲತಾಣಗಳ ಬಳಕೆಯಿಂದಲೂ ನೀವು ಇಂತಹ ವಸ್ತುಗಳು ಎಲ್ಲಿ ಸಿಗುತ್ತವೆ ಎಂಬುವುದು ಮತ್ತು ಅವುಗಳ ಬಳಕೆ ಎಲ್ಲವೂ ಆಗುವ ಸಾಧ್ಯತೆಗಳು ಇರುತ್ತವೆ ಮತ್ತು ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಗೆ ಒಳಗಾದಾಗ ಅದನ್ನು ಪ್ರಾಥಮಿಕ ಹಂತದಲ್ಲಿಯೇ ನಿವಾರಣೆ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಮಂಗಳೂರಿನ ರೋಶ್ನಿ ನಿಲಯದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿ. ರಮ್ಯಾ ಮಾತನಾಡಿ, ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು ಆರೋಗ್ಯವಾಗಿರುವುದಿಲ್ಲ ಅವರು ವಿದ್ಯಾಭ್ಯಾಸದ ಕಡೆಗೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸುತ್ತ ಮುತ್ತಲಿನ ಜನರ ಜೊತೆ ಬೆರೆಯುವಾಗ ಜಾಗರಿಕೃತರಾಗಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು .

ವೇದಿಕೆಯಲ್ಲಿ ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಸುಭಾಶ್ ಝಾ, ಶರತ್ ಗೋರೆ ಮತ್ತು ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕನಿಷ್ಕ ಪ್ರಕಾಶ್ ಮತ್ತು ಶ್ರೇಯಸ್ ಶಾನುಭೋಗ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಮಾದಕ ದ್ರವ್ಯ ವಿರೋಧಿ ಘಟಕದ ಸಂಯೋಜಕಿ ಅರುಣ್ ಕುಮಾರ್ ಎಚ್. ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕ ಅಜಿತ್ ಕುಮಾರ್ ವಂದಿಸಿದರು.