ಗುರುವಾಯನಕೆರೆ : ಭಾರತೀಯ ವಾಯುಸೇನೆಯಲ್ಲಿದ್ದ ನಾಯಬ್ ಸುಬೇದಾರ್ ಏಕನಾಥ ಶೆಟ್ಟಿ ಅವರು ಹುತಾತ್ಮರಾಗಿ ಇಂದಿಗೆ 9 ವರ್ಷ ಪೂರ್ಣಗೊಂಡಿದೆ. 2016ರ ಜು. 22ರಂದು 29 ಸೈನಿಕರನ್ನು ಚೆನೈನ ತಾಂಬರಮ್ ಏರ್ ಫೋರ್ಸ್ ಸ್ಟೇಷನ್‌ನಿಂದ ಪೋರ್ಟ್ ಪ್ಲೇರ್‌ಗೆ ಕೊಂಡೊಯ್ಯುತ್ತಿದ್ದ ಭಾರತೀಯ ವಾಯುಸೇನೆಯ AN-32 ವಿಮಾನ ತನ್ನ ಹಾರಾಟದ 42 ನಿಮಿಷಗಳ ನಂತರ ಭೂ ಕೇಂದ್ರದ ಸಂಪರ್ಕ ಕಳೆದುಕೊಂಡು ಅಪಘಾತಕ್ಕೀಡಾಗಿದ್ದ ವಿಮಾನದಲ್ಲಿ ಏಕನಾಥ್ ಶೆಟ್ಟಿ ಕೂಡ ಇದ್ದರು. ಈ ದುರ್ಘಟನೆ ನಡೆದಿದ್ದ ವೇಳೆ ಅವರು ಅಂಡಮಾನ್ ಪೋರ್ಟ್‌ಪ್ಲೇರ್‌ನಲ್ಲಿ ವಾಯುಸೇನೆಯ ಡಿಎಸ್‌ಸಿ (ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್) ಆಗಿದ್ದರು.
ಭಾರತದ ಅತಿ ದೊಡ್ಡ ಶೋಧನಾ ಕಾರ್ಯಾಚರಣೆಗೆ ಎಡೆ ಮಾಡಿಕೊಟ್ಟ ಈ ಅಪಘಾತದಲ್ಲಿ ವಿಮಾನದ ಯಾವುದೇ ಅವಶೇಷಗಳು ಸಿಗದಿದ್ದ ಕಾರಣ, 2016ರ ಸೆಪ್ಟೆಂಬರ್ 15ರಂದು ಶೋಧ ಕಾರ್ಯಕ್ಕೆ ತೆರೆ ಎಳೆಯಲಾಗಿತ್ತು ಹಾಗೂ ವಿಮಾನದಲ್ಲಿದ್ದ ಎಲ್ಲರೂ ಅಸ್ತಂಗತರಾದರೆಂದು ಸಾರಲಾಯಿತು. ಸುಮಾರು ಎಂಟು ವರ್ಷಗಳ ನಂತರ, 2024ರ ಜನವರಿಯಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯವರು 3400 ಮೀಟರ್ ಆಳದಲ್ಲಿ ವಿಮಾನದ ಆವಶೇಷಗಳನ್ನು ಪತ್ತೆ ಮಾಡಿದರು. ಈ ಅಪಘಾತದಲ್ಲಿ ಕರ್ನಾಟಕದ ರಾಜ್ಯ ನಾಯಬ್ ಸುಬೇದಾರ್ ಏಕನಾಥ ಶೆಟ್ಟಿ ಅವರು ಹುತಾತ್ಮರಾಗಿದ್ದರು. ಏಕನಾಥ ಶೆಟ್ಟಿಯವರು ಕಾರ್ಗಿಲ್ ಯೋಧ ಎಂಬುದು ಉಲ್ಲೇಖಾರ್ಹ.