ಬೆಳ್ತಂಗಡಿ: ಕಾಡುಪ್ರಾಣಿಗಳ ಹಾವಳಿಯಿಂದ ರಕ್ಷಣೆ ಕೋರಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಕರ್ನಾಟಕ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಷನ್ ಹಾಗೂ ಡಿ.ಕೆ.ಆರ್.ಡಿ.ಎಸ್. ಸ್ನೇಹಕಿರಣ ಮಹಿಳಾ ಜಿಲ್ಲಾ ಒಕ್ಕೂಟದ ವತಿಯಿಂದ ಜನಾಂದೋಲನ ಕಾರ್ಯಕ್ರಮವು ಜು.21ರಂದು ನಡೆಯಿತು.
ಕರ್ನಾಟಕ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಷನ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧ್ಯಕ್ಷ ಬಿಟ್ಟಿ ನೆಡುನಿಲಂ ಪ್ರಸ್ತಾವಿಕವಾಗಿ ಮಾತನಾಡಿ ಕೃಷಿಗೆ ಹಾಗೂ ಕೃಷಿಕನ ಜೀವ ಹಾಗೂ ಜೀವನಕ್ಕೆ ರಕ್ಷಣೆ ನೀಡಬೇಕು. ಕೃಷಿ ಭೂಮಿಯಲ್ಲಿ ಆನೆದಾಳಿಗಳಿಗೆ ಆನೆ ಕಂದಕಗಳನ್ನು ನಿರ್ಮಿಸಿದರೂ ಪ್ರಯೋಜನವಾಗುತ್ತಿಲ್ಲ. ಅರಣ್ಯ ಪ್ರದೇಶಗಳ ಸುತ್ತ ನೇತಾಡುವ ಬೇಲಿಯಲ್ಲಿ ಸೋಲಾರ್ ಫೆನ್ಸಿಂಗ್ ವ್ಯವಸ್ಥೆ ಮಾಡಬೇಕು. ಕೃಷಿ ಹಾಗೂ ಕೃಷಿಕನ ಜೀವಕ್ಕೆ ಸಮರ್ಪಕ ರಕ್ಷಣೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ.

KSMCA ಇದರ ನಿರ್ದೇಶಕ ಆದರ್ಶ್ ಜೋಸೆಫ್ ಮಾತನಾಡಿ ರಾಜ್ಯದಾದ್ಯಂತ ಕಾಡುಪ್ರಾಣಿಗಳು ಮತ್ತು ಕೃಷಿಕನ ನಡುವಿನ ಘರ್ಷಣೆಗೆ ಯಾವಾಗ ಅಂತ್ಯ ಎಂದು ತಿಳಿಯಬೇಕಾಗಿದೆ. ಕೃಷಿಕರ ಭೂ ಪರಿವರ್ತನೆ ಆಗುತ್ತಿಲ್ಲ. ಅದಕ್ಕೆ ಪರಿಹಾರ ದೊರಕಿಸಿಕೊಡಬೇಕು. ಗಾಯದ ಮೇಲೆ ಬರೆ ಎಳೆದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಹಾಗೂ ಸರ್ಕಾರದವರು ಅಗತ್ಯ ಕ್ರಮ ಕೈಗೊಳ್ಳಲೇಬೇಕು. ಜನರ ಜೀವ ಹೋದ ಮೇಲೆ ಪರಿಹಾರ ಕೊಟ್ಟರೆ ಪ್ರಯೋಜನವಿಲ್ಲ. ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಪ್ರತ್ಯುತ್ತರ ನೀಡುತ್ತೇವೆ. ಸಮತೋಲನ ಕಾಪಾಡಲು ಕಾಡುಪ್ರಾಣಿಗಳು ಬದುಕಬೇಕು, ಕೃಷಿಕರೂ ಕೂಡ ಬದುಕಬೇಕು ಹಾಗೂ ಪ್ರಕೃತಿಯೂ ಉಳಿಯಬೇಕು.ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಫಲ ಬರುವ ಗಿಡಗಳನ್ನು ಅರಣ್ಯ ಪ್ರದೇಶದ ಸುತ್ತಲಿನ ಭೂಮಿಯಲ್ಲಿ ನೆಡಬಾರದು, ಆನೆ ಕಂದಕಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಬೇಕು. ಕೃಷಿಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ನೀಡಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಲಕ್ಷ್ಮೀಶ್ ದಬ್ಲಡ್ಕ ಮಾತನಾಡಿ ಕೃಷಿ ಎಂಬುದು ಸಮಾಜದ ಆರ್ಥಿಕ ಚಕ್ರ ತಿರುಗಲು ಬಹುಮುಖ್ಯ ಶಕ್ತಿ. ಆದರೆ ಕೃಷಿಕರಿಗೆಯೇ ರಕ್ಷಣೆಯಲ್ಲಿ ಸರಿಯಾದ ಸ್ಪಂದನೆ ಸಿಗದಿರುವುದು ಖಂಡನಾರ್ಹ. ಬೀದಿ ನಾಯಿಗಳಿಗೆ, ಕಾಡುಪ್ರಾಣಿಗಳ ಮೇಲೆ ಇರುವ ಪ್ರೀತಿ ಕೃಷಿಕರ ಮೇಲೆ ಇಲ್ಲದಾಗಿದೆ. ಅರಣ್ಯ ಭೂಮಿಯನ್ನು ಕೃಷಿಕರು ಒತ್ತುವರಿ ಮಾಡುತ್ತಿದ್ದಾರೆ ಎಂಬುದು ಸಮಂಜಸವಲ್ಲ. ಜನರ ಆಕ್ರೋಶವನ್ನು ತಡೆಯಲಾಗದೆ ಬ್ರಿಟಿಷರು ಓಡಿ ಹೋದದ್ದು ತಿಳಿದಿದೆ. ಜನಸ್ನೇಹಿ ಕಾನೂನಾತ್ಮಕ ರೂಪುರೇಶೆಗಳನ್ನು ರಚಿಸಬೇಕು. ಅರಣ್ಯದಂಚಿನಲ್ಲಿ ಬದುಕುವ ರೈತರ ಬದುಕು ಭದ್ರವಾಗಲಿ ಎಂದರು.
ವಲಯರಾಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್. ಮಾತನಾಡಿ ಬೆಳ್ತಂಗಡಿ ತಾಲೂಕಿನಾದ್ಯಂತ 30000ಎಕ್ರೆ ನೋಡಿಕೊಳ್ಳಲು 35 ಸಿಬ್ಬಂದಿ ಇದ್ದಾರೆ. ಸಿಬ್ಬಂದಿಗಳ ಕೊರತೆಯಿಂದ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ನೇತಾಡುವ ಸೋಲಾರ್ ಫೆನ್ಸ್ ಗಳಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಅನುದಾನ ಬಂದ ಕೂಡಲೇ ಶೀಘ್ರ ವ್ಯವಸ್ಥೆ ಮಾಡುತ್ತೇವೆ ಎಂದರು. KSMCA ವತಿಯಿಂದ ವಲಯ ಅರಣ್ಯಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಥೋಮಸ್ ಜೋಸೆಫ್, ಜೈಸನ್ ಪಟ್ಟೇರಿ ಸೆಬಾಸ್ಟಿಯನ್, ನ್ಯಾಯವಾದಿ ಸೇವಿಯರ್ ಪಾಲೇಲಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.