ಇಂಗ್ಲಿಷ್ ಭಾಷಾ ಜ್ಞಾನ ಈ ಕಾಲದ ಅನಿವಾರ್ಯತೆ: ರಾಘವ ಶರ್ಮ ನಿಡ್ಲೆ

0

ಉಜಿರೆ: “ ಇಂಗ್ಲಿಷ್ ಭಾಷೆಯನ್ನು ಕೇವಲ ಒಂದು ಭಾಷೆ ಎಂದು ಪರಿಗಣಿಸಿ ಕಡೆಗಣಿಸಬೇಡಿ. ಇಂಗ್ಲಿಷ್ ಒಂದೇ ಭಾಷೆಯಲ್ಲ, ಹಲವಾರು ಭಾಷೆಗಳು ಇವೆ. ಆದರೆ ಜಗತ್ತಿನಾದ್ಯಂತ ಮನ್ನಣೆ ಪಡೆದ ಒಂದೇ ಒಂದು ಭಾಷೆ ಎಂದರೆ ಅದು ಇಂಗ್ಲಿಷ್. ಅದನ್ನು ಕಲಿಯುವುದು ಈ ಕಾಲದ ಅನಿವಾರ್ಯತೆ” ಎಂದು ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್ ನ ಪಿ.ಆರ್.ಒ (ಪಬ್ಲಿಕ್ ರಿಲೇಶನ್ ಆಫೀಸರ್) ರಾಘವ ಶರ್ಮ ನಿಡ್ಲೆ ಹೇಳಿದರು.

ಇಲ್ಲಿನ ಶ್ರೀ.ಧ.ಮಂ. ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಜು. 18ರಂದು ಆಯೋಜಿಸಲಾಗಿದ್ದ 2025- 26ನೇ ಶೈಕ್ಷಣಿಕ ವರ್ಷದ ಲಿಟರರಿ ಅಸೋಸಿಯೇಷನ್ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿ ಅವರು ಮಾತನಾಡಿದರು.

“ಯಾವುದೇ ವಿಷಯಗಳನ್ನು ನಾವು ಅರಿತು ಕೊಳ್ಳುವುದಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳುವುದೇ ಮುಖ್ಯವಾದುದು. ವಿಭಾಗದಿಂದ ನಡೆಸುವ ಸ್ಕೂಲ್ ಅಡೊಪ್ಶನ್ ಕಾರ್ಯಕ್ರಮ, ಅತಿಥಿ ಉಪನ್ಯಾಸಕ ಕಾರ್ಯಕ್ರಮ, ಸ್ಪೀಕ್ ದ ರೈಟರ್ ಮುಂತಾದ ಕಾರ್ಯಕ್ರಮಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಭಾಷಾ ಜ್ಞಾನ ಇಲ್ಲಿಂದ ವೃದ್ಧಿಸುತ್ತದೆ. ಇಂಗ್ಲಿಷ್ ಭಾಷಾ ಪಂಡಿತರಿಗೆ ಉದ್ಯೋಗವಕಾಶ ಹೇರಳವಾಗಿರುತ್ತದೆ. ಒಂದೇ ಭಾಷೆಗೆ ನಮ್ಮನ್ನು ಸೀಮಿತಗೊಳಿಸಿದರೆ ಅವಕಾಶವೂ ಅಷ್ಟೇ ಕಡಿಮೆಯಾಗುತ್ತದೆ” ಎಂದು ಅವರು ಹೇಳಿದರು.

“ನಾನು ಮೊದಲಿನಿಂದಲೂ ಇಂಗ್ಲಿಷ್ ಭಾಷೆಯನ್ನ ಓದಿಕೊಂಡು ಬಂದಿದ್ದವನಲ್ಲ. ಡಿಗ್ರಿ ಜೀವನದಲ್ಲಿ ಮೊದಲಾಗಿ ಪತ್ರಿಕೋದ್ಯಮದ ಜೊತೆಗೆ ಇಂಗ್ಲಿಷ್ ಸಾಹಿತ್ಯವನ್ನು ಓದಿದ್ದೆ. ಆದರೂ ಕೂಡ ನಾನು ಕೆಲಸಕ್ಕಾಗಿ ದೆಹಲಿಗೆ ತೆರಳಿದ ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ನ ಕಲಾಪ ಸೇರಿ ವಿವಿಧ ಸಂದರ್ಭಗಳಲ್ಲಿ ಇಂಗ್ಲೀಷಿನಿಂದ ಮತ್ತೊಂದು ಭಾಷೆಗೆ ಭಾಷಾಂತರ ಮಾಡಬೇಕಾದ ಸನ್ನಿವೇಶಗಳಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದ್ದೇನೆ. ಮುಂದೆ ನೀವು ಯಾವುದೇ ರೀತಿಯ ಕೆಲಸಗಳಿಗೆ ತೆರಳುವಾಗಲೂ ಕೂಡ ನಿಮಗೆ ಇಂಗ್ಲಿಷ್ ಭಾಷಾ ಜ್ಞಾನ ಎಷ್ಟಿದ್ದರೂ ಕೂಡ ಜಾಸ್ತಿಯಾಗದು. ದಿನ ನಿತ್ಯ ಕನ್ನಡ ಪತ್ರಿಕೆಗಳ ಜೊತೆಗೆ ಇಂಗ್ಲಿಷ್ ಪತ್ರಿಕೆಗಳು, ವೆಬ್ಸೈಟಿನಲ್ಲಿ ಬರುವಂತಹ ವಾರ್ತೆಗಳನ್ನು ಓದುವುದರಿಂದ ಇದು ಭಾಷಾ ಕಲಿಕೆಗೆ ಬಹಳಷ್ಟು ಸಹಾಯ ಮಾಡುತ್ತದೆ. ಇದು ವೈಜ್ಞಾನಿಕ ಜಗತ್ತು, ವಿಜ್ಞಾನದ ಜೊತೆಗೆ ನಾವು ಕೂಡ ಮುಂದುವರಿಯಬೇಕು. ಸೋಶಿಯಲ್ ಮೀಡಿಯಾ ಯುಗದಲ್ಲಿ ನಾವು ಅದರ ಒಂದು ಭಾಗವಾಗಿರಬೇಕು. ಆದರೆ ಸಾಮಾಜಿಕ ಜಾಲತಾಣಗಳು ನಮ್ಮನ್ನು ಆಳ್ವಿಕೆ ಮಾಡದ ಹಾಗೆ ಜಾಗರೂಕರಾಗಿರಿ.” ಎಂದು ರಾಘವ ಶರ್ಮ ನಿಡ್ಲೆ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಗಜಾನನ ಆರ್. ಭಟ್ ಮಾತನಾಡಿ ವರ್ಷದ ವಿವಿಧ ಚಟುವಟಿಗಳಿಗೆ ಶುಭಹಾರೈಸಿದರು. ಇಂಗ್ಲೀಷ್ ವಿಭಾಗದ ವತಿಯಿಂದ ನಡೆಸುವ ಸ್ಕೂಲ್ ಅಡೊಪ್ಶನ್ ಕಾರ್ಯಕ್ರಮ, ಅತಿಥಿ ಉಪನ್ಯಾಸಕ ಕಾರ್ಯಕ್ರಮ, ಸ್ಪೀಕ್ ದ ರೈಟರ್, ಬಿತ್ತಿಪತ್ರ ಮುಂತಾದ ಕಮಿಟಿಗಳ ವಿದ್ಯಾರ್ಥಿ ಸಂಯೋಜಕರು ಈ ವರ್ಷದಲ್ಲಿ ತಮ್ಮ ಯೋಜನಾ ಕ್ರಿಯೆಗಳು ಏನೇನು ಎಂಬುದನ್ನ ಸಂಕ್ಷಿಪ್ತವಾಗಿ ವಿವರಿಸಿದರು.

ಅನುಷಾ, ಕೃಷ್ಣವೇಣಿ, ಸುಶೀರ ಪ್ರಾರ್ಥಿಸಿದರು. ತೃತೀಯ ಬಿ.ಎ. ವಿದ್ಯಾರ್ಥಿನಿ ಗೌರವಿ ಸ್ವಾಗತಿಸಿ, ಶ್ರೇಯಾ ಮಿಂಚಿನಡ್ಕ ನಿರೂಪಿಸಿದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಸನುಷಾ ಪಿಂಟೋ ವಂದಿಸಿದರು.

ಲಿಟರರಿ ಸಂಘದ ಅಧ್ಯಕ್ಷ ಚಂದನ್, ಸಂಯೋಜಕ ಪ್ರೊ.ಸೂರ್ಯ ನಾರಾಯಣ ಭಟ್ ಪಿ. ಮತ್ತು ಇನ್ನಿತರ ವಿಭಾಗ ಉಪನ್ಯಾಸಕರು ಮತ್ತು ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here