ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ 2025ರ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜು.19ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.
ಹಿರಿಯ ಉಪನ್ಯಾಸಕ ಆನಂದ್ ಪ್ರಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಸಾಧನೆಗಳಿಗೆ ಪ್ರಾಂಶುಪಾಲರ ವಿಶೇಷ ಮುತುವರ್ಜಿಯೇ ಕಾರಣ. ವಿದ್ಯಾರ್ಥಿಗಳು ಹಾಗೂ ಭೋದಕ ವರ್ಗದವರ ನಡುವೆ ಶೈಕ್ಷಣಿಕ ಅನ್ಯೋನ್ಯತೆ ಬೆಳೆಸುವಲ್ಲಿ ಉಪನ್ಯಾಸಕ ವರ್ಗದವರ ಸಹಕಾರ ಮಹತ್ತರವಾಗಿದೆ. ವಿಧೇಯರಲ್ಲದ ಮಕ್ಕಳು ವಿಧೇಯರಲ್ಲದ ಶಿಷ್ಯರು ಸಮಾಜಕ್ಕೆ ಕಂಟಕರಾಗುತ್ತಾರೆ ಎಂದರು.

ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಮಾತನಾಡಿ ಒಳ್ಳೆಯ ಪ್ರಜೆಯಾಗಿ ಭವಿಷ್ಯ ರೂಪಿಸಿಕೊಳ್ಳಬೇಕು. ಮೊದಲಿದ್ದ ಕಾಲೇಜಿನ ರೂಪುರೇಷೆಗೆ ಮತ್ತು ಈಗಿನ ರೂಪುರೇಷೆಗೆ ಅಜಗಜಾಂತರ ವ್ಯತ್ಯಾಸವಿದೆ. ಉತ್ತಮ ಭೋದಕ ವರ್ಗದ ಅವಿರತ ಪ್ರಯತ್ನದ ಫಲವನ್ನು ನಾವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಕಾಣಬಹುದು. ಮಕ್ಕಳಲ್ಲಿ ಶಿಸ್ತು ಹೆಚ್ಚಾಗಿದೆ ಆದರೂಕೂಡ ರಸ್ತೆ ಬದಿಯಲ್ಲಿ ಸಂಚರಿಸುವಾಗ ಜಾಗ್ರತೆ ವಹಿಸಿ ಬದಿಯಲ್ಲಿ ನಡೆದುಕೊಂಡು ಹೋಗಬೇಕು ಎಂದರು.
ಕಾಲೇಜಿನ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ. ಕೆ. ಧನಂಜಯ್ ರಾವ್ ಮಾತನಾಡಿ ಅವಕಾಶಗಳನ್ನು ಯಾರು ಸದ್ಬಳಕೆ ಮಾಡುತ್ತಾರೆ ಅವರು ಸದೃಢ ಜೀವನ ನಡೆಸಿ ರಾಷ್ಟ್ರ ನಿರ್ಮಾಣ ಮಾಡಲು ಸಹಕರಿಯಾಗುತ್ತಾರೆ. ಸಾಧನೆ ಮಾಡುವವರಿಗೆ ಟೀಕೆಗಳು ಸಹಜ. ವಿದ್ಯಾರ್ಥಿ ನಾಯಕರನ್ನು ಉದ್ದೇಶಿಸಿ ಅವಕಾಶ ಸಿಕ್ಕಿರುವುದರ ಸದ್ಬಳಕೆ ಮಾಡುವುದೇ ಯಶಸ್ವಿ ಪುರುಷನ ಲಕ್ಷಣ ಎಂದರು. ಆರ್ಥಿಕ ಒತ್ತಡಕ್ಕೆ ಆಶಯಗಳನ್ನು ಬದಿಗೊತ್ತಬಾರದು. ಉಪನ್ಯಾಸಕರ ಹಾಗೂ ಪೋಷಕರು ಆಶಯಗಳಿಗೆ ಪೂರಕವಾಗಿ ಕಷ್ಟಪಟ್ಟು ಕನಸುಗಳನ್ನು ಬೆನ್ನತ್ತಿ ಆಸಕ್ತಿಯ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿ ಯಶಸ್ಸಿನ ಶಿಖರ ಏರಬೇಕು ಎಂದರು.
ನಿವೃತ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಛಾಪನ್ನು ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಗುರುಗಳೇ ಪೂರಕ. ಗುರು ಇಲ್ಲದೆ ಶಿಷ್ಯರು ಇಲ್ಲ. ಶಿಸ್ತು ಬದ್ಧ ಜೀವನಕ್ಕೆ ಗುರುಗಳು ಅತ್ಯಗತ್ಯ. ಹೇಗೆ ಶಿಲ್ಪಿ ಕಲ್ಲಿನಲ್ಲಿರುವ ಅನಗತ್ಯ ವಸ್ತುಗಳನ್ನು ಕೆತ್ತಿ ಸುಂದರ ಮೂರ್ತಿಯನ್ನು ರೂಪಿಸುತ್ತನೋ ಹಾಗೆಯೇ ಗುರುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾರೆ. ಪ್ರಾಂಶುಪಾಲ ಸುಕುಮಾರ್ ಜೈನ್ ರವರ ಶೈಕ್ಷಣಿಕ ಉದ್ದೇಶ ಮತ್ತು ಭವಿಷ್ಯದ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಬಿಂಬಿಸುತ್ತಿದೆ.
ಸುಕುಮಾರ್ ಜೈನ್ ಮಾತನಾಡಿ ನೂತನವಾಗಿ ವಿದ್ಯಾರ್ಥಿ ಮಂಡಲಕ್ಕೆ ಆಯ್ಕೆಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಕಲಿಕೆಯೊಂದೇ ಗುರಿ ಎಂದು ತಿಳಿದು ಪಾಲಿಸಬೇಕು. ವಿದ್ಯಾರ್ಥಿಗಳು ಶಿಸ್ತಿಗೆ ಆದ್ಯತೆ ನೀಡಬೇಕು. ಸಂಸ್ಕಾರಯುತ ಜೀವನವನ್ನು ಗುರಿಯಾಗಿಸಬೇಕು. ತಂದೆ ತಾಯಿಗಿಂತ ದೊಡ್ಡ ದೇವರಿಲ್ಲ. ಸಕಾರಾತ್ಮಕ ಭಾವನೆಗಳನ್ನು ಅಳವಡಿಸಿಕೊಳ್ಳಬೇಕು. ನಿದ್ರಿಸಿ ಸಾಧಿಸಿದವರಿಲ್ಲ ಆದ್ದರಿಂದ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಶ್ರಮಪಟ್ಟು ಕಲಿತು ಸಾಧನೆ ಮಾಡಿ ಎಂದರು.
ಕಾಲೇಜಿನ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ ವಿಷಯದಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ಪದೋನ್ನತಿಗೊಂಡು ಬಂಟ್ವಾಳ ಕಾಲೇಜಿಗೆ ವರ್ಗಾವಣೆಗೊಂಡ ಹೇಮಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
2024-25ನೇ ಸಾಲಿನಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಗಣೇಶ್ ಅವರ ಹೊಸ ಪ್ರಯೋಗದ ಮೂಲಕ ಶತಕ ಪೋಷಕ, ಶತಕ ಸಾಧಕ, ಶತಕ ಪ್ರೇಯಕ ಎಂಬ ಶೀರ್ಷಿಕೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಅವಿರತ ಶ್ರಮವಹಿಸಿದ ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಇತ್ತೀಚೆಗೆ ರೋಟರಿ ಕ್ಲಬ್ ನವರು ಕೊಡಮಾಡುವ ಕ್ಯಾಂಪಸ್ ಚೇಂಜ್ ಮೇಕರ್ ಅವಾರ್ಡ್ ಗೆ ಭಾಜನರಾದ ಪ್ರಾಂಶುಪಾಲ ಸುಕುಮಾರ್ ಜೈನ್ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಲಾ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಕಿಶನ್, ರಂಜಿತಾ, ಸುಮಾ, ಸ್ವಸ್ತಿಕ್, ಪ್ರತೀಕ್ಷಾ, ಪವಿತ್ರ, ವಿನುತಾ, ಹರ್ಷಿತಾ, ಆಯಿಷಾ ಹಾಗೂ ವಾಣಿಜ್ಯ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಾತ್ವಿಕ್, ಸುರಕ್ಷಾ ಫಾತಿಮತ್ ಆಯಿಷಾ, ಅಶ್ರತ್, ನವ್ಯಾ ಕೆ.ಎಲ್., ರಶ್ಮಿ, ಗೌತಮಿ, ಬಿಂದುಶ್ರೀ ಬಿ., ವೀಣಾ, ನವ್ಯಶ್ರೀ, ಪ್ರಜ್ಞಾ, ಪ್ರೀತಮ್, ಸೌಮ್ಯ, ಮೋಕ್ಷಾ, ವಿದ್ಯಾಶ್ರೀ, ದೀಪಕ್, ಸ್ವಾತಿ, ಸುಮನ್ ಕೆ., ಅನುಷಾ, ಶಿಲ್ಪಾ, ಚೈತ್ರಾ, ರಕ್ಷಿತ್, ಫಾತಿಮತ್ ಸಫ್ನಜ್, ಕೀರ್ತನಾ, ರಮ್ಯಾ, ಸುಶ್ಮಿತಾ, ರಕ್ಷಿತ್ ಹಾಗೂ ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಕೀರ್ತನ್, ಉಸ್ತವ್, ವಂಶಿ, ಕಾರ್ತಿಕ್, ಕೀರ್ತನ್, ಮಧುಶ್ರೀ, ವಿದ್ಯಾ ಸರಸ್ವತಿ, ರಂಜಿತ್, ಅಭಿಷೇಕ್, ಅಶ್ವಿತಾ, ಮೋಕ್ಷಿತಾ, ಮಲ್ಲಿಕಾ ಚರಣ್ ಜಿತೇಂದ್ರ ಮತ್ತು ಚಿನ್ಮಯ್ ರವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ, ಸಿಬ್ಬಂದಿ ವರ್ಗ, ಸುವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಕೀರ್ತನಾ ಸ್ವಾಗತಿಸಿದರು. ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮನ್ವಿತಾ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫ್ಲೇವಿಟಾ ವಂದಿಸಿದರು.