ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ಉಡುಪಿ ಜಿಲ್ಲಾ ಪೊಲೀಸರ ‘ನವಚೇತನ’ ಶಿಬಿರ ಕಾರ್ಯಕ್ರಮದ ಅಂಗವಾಗಿ ಜು.15ರಂದು ಮಧ್ಯಾಹ್ನ 12.00 ಘಂಟೆಗೆ ಸರಿಯಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ವ್ಯಸನಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ತಮ್ಮ ಭಾವಪೂರ್ಣವಾದ ಮಾತುಗಳಿಂದ ಅತ್ಯದ್ಭುತವಾಗಿ ಮಾತನಾಡಿ ಕೇಳುಗರ ಮನಃ ಪರಿವರ್ತನೆಗೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಿದರು.

ಅವರ ಸಮಾಜಿಕ ಕಳಕಳಿಯ ನುಡಿಗಳು ಈಗಾಗಲೇ ಸಹಸ್ರಾರು ಮಾದಕ ವ್ಯಸನಿಗಳನ್ನು ಪುನಃ ಸ್ವಸ್ಥ ಮತ್ತು ಸ್ವಚ್ಛ ಬದುಕಿನೆಡೆಗೆ ಮುಖ ಮಾಡಿ ನಿಲ್ಲುವಂತೆ ಮಾಡಿದೆ ಎನ್ನುವುದು ಉಲ್ಲೇಖನೀಯವಾದ ವಿಷಯ. ಸಪ್ತ ವ್ಯಸನಗಳಲ್ಲಿ ಮೊದಲನೆಯದೇ ಮದ್ಯಪಾನ ಎಂದು ಹೇಳಲಾಗುತ್ತದೆ. ಅಮಲಿನ ಭ್ರಮೆ ಮನುಷ್ಯನ ಆರ್ಥಿಕ, ಸಾಮಾಜಿಕ, ಸಾಂಸರಿಕ ಬದುಕಿನ ಸ್ಥಾನಮಾನವನ್ನು ನಾಶ ಮಾಡಿ ಆತನನ್ನು ಅತೀ ಕೀಳು ಮಟ್ಟಕ್ಕೆ ಇಳಿಸುತ್ತದೆ. ಜೀವನವನ್ನು ಸಂಪೂರ್ಣವಾಗಿ ಆವರಿಸಿ ಬದುಕನ್ನೇ ನಾಶ ಮಾಡುವ ಶಕ್ತಿ ವ್ಯಸನಕ್ಕಿದೆ. ಕುಡಿತ, ಅಮಲು ಪದಾರ್ಥ ಸೇವನೆ ಸಮಾಜಕ್ಕಂಟಿದ ಶಾಪ. ಮಾದಕ ವಸ್ತು, ತಂಬಾಕು ಸೇವನೆ, ಮದ್ಯಪಾನ ಇಂದು ಯುವಜನಾಂಗವನ್ನು ದೊಡ್ಡಮಟ್ಟದಲ್ಲಿ ಅಧಪತನದೆಡೆಗೆ ತಳ್ಳುತ್ತಾ ಇದೆ. ದುಡಿಮೆ ದುಶ್ಚಟಗಳಿಗೆ ವಿನಿಯೋಗವಾಗುತ್ತಿದೆ.
ಕುಡಿತ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಆ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಮದ್ಯಮುಕ್ತ ವ್ಯಸನಿಗಳ ಶಿಬಿರ ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸಾವಿರಾರು ಶಿಬಿರಗಳನ್ನು ಸಂಘಟಿಸಿ ಸಮಾಜದ ದೊಡ್ಡ ಪಿಡುಗಾದ ಮದ್ಯವ್ಯಸನದಿಂದ ಅದೆಷ್ಟೋ ಕುಟುಂಬಗಳನ್ನು ಮುಕ್ತಗೊಳಿಸಿ ಉತ್ತಮ ಜೀವನವನ್ನು ನಡೆಸುವಂತಾಗಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಮುತುವರ್ಜಿಯಿಂದ ಆಯೋಜನೆಗೊಂಡಿರುವ ನವಚೇತನ ಶಿಬಿರದ ಹದಿನೈದನೇ ದಿವಸದಲ್ಲಿ ಈ ಕಾರ್ಯಕ್ರಮವು ಪರೀಕ ಸೌಖ್ಯವನದ ಕ್ಷೇಮ ಹಾಲ್‌ನಲ್ಲಿ ಸಂಯೋಜನೆಗೊಂಡಿತು.
ಶಾಂತಿವನ ಟ್ರಸ್ಟ್ ಧರ್ಮಸ್ಥಳದ ಕಾರ್ಯದರ್ಶಿ ಬಿ.ಸೀತಾರಾಮ ತೋಳಾಡಿತ್ತಾಯ ಉಪಸ್ಥಿತರಿದ್ದು, ವಿನ್ಸೆಂಟ್ ಪಯಾಸ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿದರು. ಸುಮಾರು 90 ಮಂದಿ ಪೊಲೀಸ್ ಸಿಬ್ಬಂದಿಗಳು, ಆಸ್ಪತ್ರೆಯಲ್ಲಿ ದಾಖಲಾಗಿರುವ ಸಾಧಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ನಿರೂಪಿಸಿದರು.
ಮುಖ್ಯ ವೈದ್ಯಾಧಿಕಾರಿ ಡಾ|| ಗೋಪಾಲ ಪೂಜಾರಿ ಸೌಖ್ಯವನದಲ್ಲೂ ಜನರನ್ನು ವ್ಯಸನಮುಕ್ತರಾಗುವಂತೆ ಪ್ರಕೃತಿ ಚಿಕಿತ್ಸಾ ವಿಧಾನವನ್ನು ಅನುಸರಿಸಿ ಉಪಚರಿಸಲಾಗುವುದು ಎಂದರು. ಇಂದಿನ ಕಾರ್ಯಕ್ರಮವನ್ನು ಸಂಘಟಿಸಿದ ಎಲ್ಲರಿಗೂ ಕೃತಜ್ಞತಾಪೂರ್ವಕ ಧನ್ಯವಾದವನ್ನಿತ್ತರು.