ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನಡೆದ ಮನ್ಶರ್ ವಿದ್ಯಾರ್ಥಿ ಸಭಾ ಚುನಾವಣೆ:ಬೆಳ್ತಂಗಡಿ ತಹಶೀಲ್ದಾರ ಭೇಟಿ-ವಿದ್ಯಾರ್ಥಿಗಳ ಜೊತೆ ಸಂವಾದ

0

ಬೆಳ್ತಂಗಡಿ: ಶಾಲಾ ಕಾಲೇಜು ಪ್ರಾರಂಭಗೊಂಡ ಪ್ರಾರಂಭದ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳ ಮಂತ್ರಿಮಂಡಲ ರಚನೆ ಮಾಡುವುದು ವಾಡಿಕೆ. ಗೇರುಕಟ್ಟೆಯ ಮನ್ಶರ್ ವಿದ್ಯಾ ಸಂಸ್ಥೆಯಲ್ಲಿ ಈ ಬಾರಿ ಕರ್ನಾಟಕ ವಿಧಾನಸಭಾ ಕ್ಷೇತ್ರ ಚುನಾವಣೆಯ ಪ್ರಕ್ರಿಯೆಯಂತೆ ಸಂಪೂರ್ಣ ಅಣಕು ಚಿತ್ರಣದಂತೆಯೇ ವಿದ್ಯಾರ್ಥಿ ಸಭಾ ನಡೆಸಲಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿ ಚುನಾವಣೆ ನಡೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ ಈ ಅಣಕು ಚುನಾವಣೆಯನ್ನು ಹಮ್ಮಿಕೊಳ್ಳಲಾಯಿತು.

ಪ್ರಕ್ರಿಯೆಯನ್ನು ವೀಕ್ಷಿಸಲು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸನಿಗಮ್ ಆಗಮಿಸಿ ಚಾಲನೆ ನೀಡಿದರು. ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ತಹಶಿಲ್ದಾರರು, ಚುನಾವಣೆ, ಕಂದಾಯ ಇಲಾಖೆಯ ಕರ್ತವ್ಯಗಳು ಮತ್ತು ವ್ಯಾಪ್ತಿ ಬಗ್ಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಕೊಕ್ಕಡ ಹೋಬಳಿಯ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ, ಕಳಿಯ ಗ್ರಾಮ ಆಡಳಿತಾಧಿಕಾರಿ ಪೃಥ್ವಿ ಉಪಸ್ಥಿತರಿದ್ದರು.

ಮನ್ಶರ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಅವರೂ ಭೇಟಿ ನೀಡಿ ಸಂಸ್ಥೆಯ ಸಿಬ್ಬಂದಿಯ ಈ ಪ್ರಯತ್ನವನ್ನು ಕೊಂಡಾಡಿದರು.
ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ ನಿರ್ವಹಿಸಿದರು. ಪಿ.ಆರ್.ಓ ಅಧಿಕಾರಿಯಾಗಿ ಪ್ರಾಂಶುಪಾಲೆ
ಝೀನತ್ ಬಾನು ಅವರು ಕಾರ್ಯನಿರ್ವಹಿಸಿದರು.

ಮನ್ಶರ್ ಪಿ.ಯು ಕಾಲೇಜ್ ಉಪನ್ಯಾಸಕರು, ವಿದ್ಯಾರ್ಥಿಗಳು, ಪ್ಯಾರಾಮೆಡಿಕಲ್ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು, ಹಾಗೂ ಮನ್ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಶಿಕ್ಷಕ, ಶಿಕ್ಷಕೇತರ ವೃಂದದವರ ಸಹಕಾರ ನೀಡಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮಾರ್ದಾಳ ಮೇಲುಸ್ತುವಾರಿ ವಹಿಸಿ ಎಂದಿನಂತೆ ಸಂಘಟನಾ ಕೌಶಲ್ಯ ಮೆರೆದರು.

ವಿಧಾನಸಭಾ ಚುನಾವಣೆಯಂತೆ ಅಧಿಸೂಚನೆ, ದಿನಾಂಕ ಪ್ರಕಟ, ನೀತಿ ಸಂಹಿತೆ ಜಾರಿ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ, ಹಾಗೂ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡ ಹತ್ತು ಕ್ಷೇತ್ರಗಳ ರಚನೆ ಮಾಡಿ ಮಾದರಿ ಹೆಸರುಗಳನ್ನು ಇಟ್ಟು ಮೂರು ವಿದ್ಯಾರ್ಥಿ ಪಕ್ಷಗಳನ್ನ ರಚಿಸಿ ಚುನಾವಣಾ ಪ್ರಕ್ರಿಯೆಗೆ ಬೇಕಾದ ಎಲ್ಲಾ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿಲಾಗಿತ್ತು.

10 ವಿದ್ಯಾರ್ಥಿ ಸಭಾ ಕ್ಷೇತ್ರಗಳಿಗೆ ಸುಮಾರು 30 ಅಭ್ಯರ್ಥಿಗಳು ಹಾಗೂ ಎರಡು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಪಾರ್ಟಿ ಬೂತ್, ಮತಗಟ್ಟೆ, ಮತಗಟ್ಟೆಯಲ್ಲಿ ವಿವಿಧ ಅಧಿಕಾರಿಗಳ ನಿಯೋಜನೆ , ಈವಿಎಂ ಯಂತ್ರ ಮತ್ತು ಬ್ಯಾಲೆಟ್ ಪೇಪರ್ ಎರಡೂ ವಿಧಾನಗಳನ್ನೂ ಅಳವಡಿಸಲಾಗಿತ್ತು. ಮತ ಎಣಿಕೆ, ಫಲಿತಾಂಶ ಘೋಷಣೆ, ರಾಜ್ಯಪಾಲರಿಗೆ ವಿಶ್ವಾಸ ಮತ ಮಂಡನೆ, ಬಹುಮತ ಪಡೆದ ಪಕ್ಷದಿಂದ ಸರ್ಕಾರ ರಚನೆ ಮುಂತಾದ ಚುನಾವಣೆಗೆ ಸಂಬಂಧಿಸಿದ ಹಂತ ಹಂತಗಳನ್ನು ಅಣುಕು ಪ್ರದರ್ಶನದ ಮೂಲಕ ಮಕ್ಕಳಿಗೆ ಅರಿವನ್ನು ನೀಡಲಾಯಿತು.

ಚುನಾವಣೆ ಫಲಿತಾಂಶ; ಮುಖ್ಯ ಮಂತ್ರಿ ಆಯ್ಕೆ: ಸಂಜೆ ಫಲಿತಾಂಶ ಪ್ರಕಟಗೊಂಡಾಗ ನಕ್ಷತ್ರ ಚಿಹ್ನೆಯ ಲರ್ನರ್ಸ್ ಪಾರ್ಲಿಮೆಂಟ್ ಲೀಗ್ ಪಕ್ಷವು ಬಹುಮತವನ್ನು ಪಡೆದು ಸರಕಾರ ರಚನೆಯನ್ನು ಮಾಡಿತು. ಪಕ್ಷದ ಪ್ರಭಾವಿ ಅಭ್ಯರ್ಥಿ ಅಬೂಬಕರ್ ಶಾಹಿದ್ ಅವರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಯಿತು. ಮಹಮ್ಮದ್ ಜಾಹಿದ್ ಉಪಮುಖ್ಯಮಂತ್ರಿಯಾಗಿ, ಮಹಮ್ಮದ್ ಸಹಲ್ ಆರೋಗ್ಯ ಮಂತ್ರಿಯಾಗಿ, ಮುಹಮ್ಮದ್ ರಾಹಿದ್ ಕ್ರೀಡಾ ಮಂತ್ರಿಯಾಗಿ, ಮುಹಮ್ಮದ್ ತಾಹಿರ್ ಶಿಸ್ತು ಪಾಲನಾ ಮಂತ್ರಿಯಾಗಿ, ಮುಹಮ್ಮದ್ ಸಫಿಯುಲ್ಲಾ ಶಿಕ್ಷಣ ಮಂತ್ರಿಯಾಗಿ, ಪಿ.ಕೆ ಮುಹಮ್ಮದ್ ಅನಸ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here