ಬೆಳ್ತಂಗಡಿ: ರಾಜೀ ಸಂಧಾನದ ಮೂಲಕ ಹಲವು ಬಗೆಯ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಜನತೆಗೆ ಉತ್ತಮವಾದ ಅವಕಾಶವಿದ್ದು, ಜು. 12ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಮೂಲಕ ಇತ್ಯರ್ಥ ಮಾಡುವುದರಿಂದ ಹಣ ಮತ್ತು ಸಮಯದ ಉಳಿತಾಯ ಮಾಡಬಹುದು. ಬದುಕಿನಲ್ಲಿ ಮಾನಸಿಕ ನೆಮ್ಮದಿ ಹಾಗೂ ತ್ವರಿತ ನ್ಯಾಯಾಧಾನ ದೊರಕುವಂತಾಗುತ್ತದೆ ಎಂದು ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಮನು ಬಿ.ಕೆ. ಹೇಳಿದರು. ಅವರು ಜು.3ರಂದು ಕೋರ್ಟ್ ಹಾಲ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಈ ಲೋಕ ಅದಾಲತ್ ನಡೆಯಲಿದ್ದು, ಬೆಳ್ತಂಗಡಿ ಮೂರು ನ್ಯಾಯಾಲಯಗಳಲ್ಲಿ ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು. ಆಡಿಯೋ ಮೂಲಕ ಪ್ರಚಾರ ಲೋಕ ಅದಾಲತ್ ಬಗ್ಗೆ ಜನಸಾಮನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಈ ಬಾರಿ ಪಟ್ಟಣ ಪಂಚಾಯತ್ ಕಸ ವಿಲೇವಾರಿ ವಾಹನದಲ್ಲಿ ವಿಶೇಷ ಆಡಿಯೋ ತುಣುಕನ್ನು ಪ್ರಚಾರಕ್ಕಾಗಿ ಬಳಕೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಸಂದೇಶ್, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಹೆಚ್., ವಕೀಲ ಸಂಘದ ಅಧ್ಯಕ್ಷ ವಸಂತ ಮರಕಡ, ಕಾರ್ಯದರ್ಶಿ ನವೀನ್ ಬಿ.ಕೆ. ಉಪಸ್ಥಿತರಿದ್ದರು.